ವಿಜಯಸಾಕ್ಷಿ ಸುದ್ದಿ, ಗದಗ: ಕಪ್ಪತ್ತಗಿರಿ ಮಲ್ಲಯ್ಯ ದೇವಸ್ಥಾನದ ವಿಚಾರವಾಗಿ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಶ್ರೀಕಾಂತ ಸ್ವಾಮೀಜಿ ಸಹೋದರರಲ್ಲಿ ಭಿನ್ನಾಭಿಪ್ರಾಯ ಇದ್ದು, ಅದನ್ನು ಸರಿಪಡಿಸಲು ಅನೇಕ ಬಾರಿ ಪ್ರಯತ್ನಪಟ್ಟರೂ ವಿಫಲವಾಗಿದೆ. ಪ್ರಸ್ತುತ ದೇವಸ್ಥಾನಕ್ಕೆ ಭಕ್ತರಿಂದ ಸಾಕಷ್ಟು ಹಣ ಬರುತ್ತಿದ್ದು, ಮಲ್ಲಿಕಾರ್ಜುನ ಸ್ವಾಮೀಜಿ ತಮ್ಮ ಹಿಂಬಾಲಕರೊಂದಿಗೆ ಶಾಮೀಲಾಗಿ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಅವರ ತಾಯಿ, ಅಕ್ಕ ಮತ್ತು ತಮ್ಮನ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಾರೆ ಎಂದು ಶಿವರಾಮಕೃಷ್ಣ ಸೇವಾ ಟ್ರಸ್ಟ್ ಗದಗ ಜಿಲ್ಲಾಧ್ಯಕ್ಷ ರಾಜು ಖಾನಪ್ಪನವರ ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆಗಸ್ಟ್ 14ರಂದು ಕಪ್ಪತ್ತಮಲ್ಲಯ್ಯನ ಜಾತ್ರೆ ಇದ್ದು, ಈ ಜಾತ್ರೆಗೆ ಆಗಮಿಸದಂತೆ ಕಿರಿಯ ಸಹೋದರ ಶ್ರೀಕಾಂತ ಸ್ವಾಮೀಜಿ ಅವರಿಗೆ ಮುಂಚಿತವಾಗಿ 8 ದಿನಗಳ ಕಾಲ ಊರು ಬಿಡಲು ಮುಂಡರಗಿ ತಾಲೂಕಾ ದಂಡಾಧಿಕಾರಿಗಳು ಸೂಚಿಸಿದ್ದಾರೆ. ಇದರಿಂದ ನಮಗೆ ಸಂಶಯ ಹುಟ್ಟಿದೆ. ಸಾರ್ವಜನಿಕರಿಗೆ ಪಾರದರ್ಶಕವಾದ ಆಡಳಿತ ನೀಡಬೇಕಾದ ಅಧಿಕಾರಿಯೊಬ್ಬರು ಸ್ವಾಮೀಜಿಯ ಪರವಾಗಿ ನಿಂತಿದ್ದು ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಸಹೋದರರಾದ ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಶ್ರೀಕಾಂತ ಸ್ವಾಮೀಜಿ ಇಬ್ಬರೂ ನಮಗೆ 2 ಕಣ್ಣುಗಳಿದ್ದಂತೆ. ಭಕ್ತರಿಗೆ ಇಬ್ಬರ ನಡುವೆ ಯಾವುದೇ ಭೇದ-ಭಾವವಿಲ್ಲ. ಇವರ ಮಧ್ಯೆ ಇರುವ ಭಿನ್ನಾಭಿಪ್ರಾಯವನ್ನು ದೂರ ಮಾಡಲು ಗದಗ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಮಧ್ಯೆ ಪ್ರವೇಶಿಸಿ ಇತ್ಯರ್ಥಗೊಳಿಸಬೇಕು ಎಂದು ರಾಜು ಖಾನಪ್ಪನವರ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಶಿವರಾಮಕೃಷ್ಣ ಸೇವಾ ಟ್ರಸ್ಟ್ನ ಸದಸ್ಯರಾದ ಶಿವು ಹಿರೇಮಠ, ಹುಲಗಪ್ಪ ವಾಲ್ಮೀಕಿ, ಕುಮಾರ ನಡಗೇರಿ, ಮರಿಯಪ್ಪ ಲದ್ದಿ, ಕಿರಣ ಹಿರೇಮಠ, ಮಹಾಂತೇಶ ಹೊನ್ನಪ್ಪನವರ ಮುಂತಾದವರು ಉಪಸ್ಥಿತರಿದ್ದರು.
ಆಗಸ್ಟ್ 14ರಂದು ನಡೆಯುವ ಕಪ್ಪತ್ತಗಿರಿ ಮಲ್ಲಯ್ಯನ ಜಾತ್ರೆಯಲ್ಲಿ ಶ್ರೀಕಾಂತ ಸ್ವಾಮೀಜಿಗಳ ನೇತೃತ್ವದಲ್ಲಿ ಸಾವಿರಾರು ಭಕ್ತರೊಂದಿಗೆ ಜಾತ್ರಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ತೇರಿಗೆ ಚಾಲನೆ ನೀಡುತ್ತೇವೆ. ಕೆಲವರು ತಮ್ಮ ರಾಜಕೀಯ ಪ್ರಭಾವ ಬಳಸಿ ಶ್ರೀಕಾಂತ ಸ್ವಾಮೀಜಿಗಳ ಮೇಲೆ ಸುಳ್ಳು ಪ್ರಕರಣ ದಾಖಲಿಸಿಸುವಂತೆ ಪ್ರೇರಣೆ ನೀಡಿದ್ದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
-ರಾಜು ಖಾನಪ್ಪನವರ.
ಕಪ್ತತ್ತಮಲ್ಲಯ್ಯನ ಭಕ್ತರು.