ಚಿಕ್ಕಬಳ್ಳಾಪುರ:- ಸರ್ಕಾರಿ ಟೀಚರ್ ಓರ್ವರ ಎಡವಟ್ಟಿಗೆ ಬಾಲಕನೋರ್ವ ತನ್ನ ದೃಷ್ಟಿಯನ್ನೇ ಕಳೆದುಕೊಂಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ಜರುಗಿದೆ.
ಹೌದು, ಸಿಟ್ಟಿನ ಭರದಲ್ಲಿ ಶಿಕ್ಷಕಿ ಬೀಸಿದ ಕೋಲು ವಿದ್ಯಾರ್ಥಿಯ ಕಣ್ಣನ್ನು ಕಳೆದುಕೊಳ್ಳುವಂತೆ ಮಾಡಿದೆ. ಶಿಕ್ಷಕಿಯ ಏಟಿಗೆ 1 ವರ್ಷದ ನಂತರ ಬಾಲಕನ ದೃಷ್ಟಿಯೇ ಸಂಪೂರ್ಣ ಕಾಣದಂತಾಗಿದ್ದು, ಪೋಷಕರು ನ್ಯಾಯಕ್ಕಾಗಿ ಆಗ್ರಹಿಸಿ ಜಿಲ್ಲೆಯ ಚಿಂತಾಮಣಿ ಮಗರದ ಬಿಇಒ ಕಚೇರಿ ಎದುರು ಧರಣಿ ಮಾಡಿರುವಂತಹ ಘಟನೆ ನಡೆದಿದೆ.
ಯಗವಕೋಟೆ ಗ್ರಾಮದ ನಟರಾಜ್ ಹಾಗೂ ಅಂಕಿತಾ ದಂಪತಿಗಳ ಎರಡನೇ ಮಗನಾಗಿರುವ ಯಶವಂತ್ ದೃಷ್ಟಿ ಕಳೆದುಕೊಂಡ ಬಾಲಕ. ಒಂದನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವೇಳೆ ಇದೇ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕಿ ಸರಸ್ವತಿ ಕುಳಿತ ಜಾಗದಿಂದಲೇ ಕೋಲು ಬೀಸಿದ್ದಾಳೆ, ಇದರ ಪರಿಣಾಮ ನೇರವಾಗಿ ಕೋಲು ಯಶ್ವಂತ್ ಕಣ್ಣಿಗೆ ಬಿದ್ದು ಗಾಯಗೊಂಡಿದ್ದ. ಅಂದಿನಿಂದ ಪೋಷಕರು ಎಲ್ಲ ಕಡೆ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಇದುವರೆಗೂ ಶಸ್ತ್ರ ಚಿಕಿತ್ಸೆ ಫಲಕಾರಿಯಾಗಿಲ್ಲ. ಇದ್ರಿಂದ ಒಂದು ವರ್ಷದ ನಂತರ ಬಾಲಕನ ದೃಷ್ಟಿ ಕಾಣದಾಗಿದೆ.
ತಾನು ಮಾಡದ ತಪ್ಪಿಗೆ ಚಿಕ್ಕ ವಯಸ್ಸಿನಲ್ಲೇ ಬಾಲಕ ಕಣ್ಣು ಕಳೆದುಕೊಂಡಿದ್ದಾನೆ. ಮಗನಿಗೆ ನ್ಯಾಯ ಕೊಡಿಸುವಂತೆ ಪೋಷಕರು ಕಣ್ಣೀರು ಹಾಕಿದ್ದಾರೆ.