ಗುಜರಾತ್: ಗುಜರಾತ್‌ನ ಭಾವನಗರದಲ್ಲಿ ಪ್ರಧಾನಿ ಮೋದಿ ರೋಡ್ ಶೋ ನಡೆಸಿದರು. ಮೋದಿಯವರ ಬೆಂಬಲಿಗರು ತ್ರಿವರ್ಣ ಧ್ವಜಗಳನ್ನು ಬೀಸುತ್ತಾ ಸ್ವಾಗತಿಸಿದರು. ಎಲ್ಲೆಲ್ಲೂ ಕೇಸರಿ ಶಾಲುಗಳನ್ನು ಹೊದ್ದು, ತ್ರಿವರ್ಣ ಧ್ವಜಗಳನ್ನು ಬೀಸುತ್ತಾ ಜನರು ನಿಂತಿದ್ದರು. ಪ್ರಧಾನಿಯನ್ನು ನೋಡಲು ರಸ್ತೆಗಳ ಎರಡೂ ಬದಿಗಳಲ್ಲಿ ಸಾವಿರಾರು ಬೆಂಬಲಿಗರು ಸೇರಿದ್ದರು. ಈ ವೇಳೆ ಒಬ್ಬ ಬಾಲಕ ಬಹಳ ಹೊತ್ತಿನಿಂದ ತಾನೇ ಬಿಡಿಸಿದ್ದ ಪ್ರಧಾನಿ ಮೋದಿಯ ಚಿತ್ರವನ್ನು ತೋರಿಸುತ್ತಾ ಕೈಬೀಸುತ್ತಿದ್ದ.
ಇದನ್ನು ಗಮನಿಸಿದ ಮೋದಿ ತಮ್ಮ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿ ತಮ್ಮ ಸಿಬ್ಬಂದಿಯ ಬಳಿ ಆ ಚಿತ್ರವನ್ನು ತೆಗೆದುಕೊಂಡು ಬರಲು ಸೂಚಿಸಿದರು. “ಒಬ್ಬ ಪುಟ್ಟ ಹುಡುಗ ನನ್ನ ಚಿತ್ರ ಬಿಡಿಸಿದ್ದಾನೆ. ಇಷ್ಟು ಹೊತ್ತು ಅಲ್ಲಿ ನಿಂತು ಆ ಚಿತ್ರವನ್ನು ತೋರಿಸುತ್ತಿರುವುದರಿಂದ ಅವನ ಕೈಗಳು ನೋಯುತ್ತಿರಬಹುದು. ಯಾರಾದರೂ ದಯವಿಟ್ಟು ಅದನ್ನು ತೆಗೆದುಕೊಂಡು ಬನ್ನಿ. ಚೆನ್ನಾಗಿ ಚಿತ್ರ ಬಿಡಿಸಿದ್ದ ಮಗುವೇ” ಎಂದು ಪ್ರಧಾನಿ ಮೋದಿ ಹೇಳಿದರು.
ಆಗ ಅಲ್ಲಿದ್ದ ಸಿಬ್ಬಂದಿ ಆ ಬಾಲಕನ ಬಳಿ ಹೋಗಿ ಪ್ರಧಾನಿ ಮೋದಿಯ ಚಿತ್ರವನ್ನು ತೆಗದುಕೊಂಡು ಮೋದಿಗೆ ನೀಡಿದರು. ತಾನು ಬಿಡಿಸಿದ ಚಿತ್ರ ಮೋದಿಯನ್ನು ತಲುಪಿದ ಕೂಡಲೆ ಭಾವುಕನಾದ ಆ ಪುಟ್ಟ ಬಾಲಕ ಅಳತೊಡಗಿದನು. ಅದನ್ನು ನೋಡಿ ಪ್ರಧಾನಿ ಮೋದಿ ಆತನಿಗೆ ಸಾಂತ್ವನ ಹೇಳಿದ್ದಾರೆ. ” ನೀನು ಬಿಡಿಸಿದ ಚಿತ್ರ ನನಗೆ ಸಿಕ್ಕಿತು, ಇನ್ನು ಅಳುವ ಅಗತ್ಯವಿಲ್ಲ. ಅದರ ಮೇಲೆ ನಿನ್ನ ವಿಳಾಸವಿದ್ದರೆ ನಾನು ಖಂಡಿತ ನಿನಗೆ ಪತ್ರ ಬರೆಯುತ್ತೇನೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.