ಚಿಕ್ಕಬಳ್ಳಾಪುರ: ವಿವಾಹಿತೆಯೊಬ್ಬಳನ್ನು ಪ್ರಿಯಕರ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ಬೆಳಕಿಗೆ ಬಂದಿದೆ. ಈ ದುರ್ಘಟನೆಯಿಂದ ಮೃತಳ ಇಬ್ಬರು ಪುಟ್ಟ ಮಕ್ಕಳು ಅನಾಥರಾಗಿದ್ದಾರೆ.
ಮೃತ ಮಹಿಳೆ ತೇಜಸ್ವಿನಿ (26) ಎಂದು ಗುರುತಿಸಲಾಗಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಗಂಡನನ್ನು ಬಿಟ್ಟು ಇಬ್ಬರು ಮಕ್ಕಳೊಂದಿಗೆ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದಳು. ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡು, ಅಲ್ಲಿಯೇ ನೀಡಲಾಗಿದ್ದ ಒಂದು ಕೊಠಡಿಯಲ್ಲಿ ಮಕ್ಕಳೊಂದಿಗೆ ವಾಸಿಸುತ್ತಿದ್ದಳು.
ಅಲ್ಲಿ ಪರಿಚಯವಾದ ಸಂದೀಪ್ (20) ಎಂಬ ಯುವಕನೊಂದಿಗೆ ತೇಜಸ್ವಿನಿಗೆ ಆತ್ಮೀಯತೆ ಬೆಳೆದಿತ್ತು ಎನ್ನಲಾಗಿದೆ. ಕಳೆದ ಒಂದು ತಿಂಗಳ ಹಿಂದೆ ಇಬ್ಬರೂ ಬೇರೆ ಮನೆ ಮಾಡಿಕೊಂಡು ಜೀವನ ಆರಂಭಿಸಿದ್ದರು.
ಎರಡು ದಿನಗಳ ಹಿಂದೆ ತೇಜಸ್ವಿನಿ ಮತ್ತು ಸಂದೀಪ್ ಸ್ನೇಹಿತೆ ಅರುಣಾ ಅವರ ಮನೆಯಲ್ಲಿ ತಂಗಿದ್ದಾಗ ಮದ್ಯ ಸೇವನೆಯ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ. ಜಗಳದ ವೇಳೆ ಮದ್ಯದ ಪಾಕೆಟ್ ಕತ್ತರಿಸಲು ಇಟ್ಟುಕೊಂಡಿದ್ದ ಚಾಕುವಿನಿಂದ ಸಂದೀಪ್ ತೇಜಸ್ವಿನಿಯ ಹೊಟ್ಟೆ ಭಾಗಕ್ಕೆ ಇರಿದಿದ್ದಾನೆ.
ಗಾಯಗೊಂಡ ತೇಜಸ್ವಿನಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ನೀಡಿ ಹೊಲಿಗೆ ಹಾಕಲಾಗಿತ್ತು. ಆದರೆ ಮನೆಗೆ ಬಂದ ಬಳಿಕ ವೈದ್ಯರು ನೀಡಿದ ಔಷಧಿಗಳನ್ನು ಸೇವಿಸದೆ ಮದ್ಯ ಸೇವಿಸಿ ಮಲಗಿದ್ದಾಳೆ ಎಂದು ತಿಳಿದುಬಂದಿದೆ. ಇದರಿಂದ ಗಾಯ ಸೆಪ್ಟಿಕ್ ಆಗಿ ಹೊಟ್ಟೆಯಲ್ಲಿ ಸೋಂಕು ವ್ಯಾಪಿಸಿ ಆರೋಗ್ಯ ಸ್ಥಿತಿ ಗಂಭೀರಗೊಂಡಿದೆ.
ಮತ್ತೆ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಅಂಗಾಂಗ ವೈಫಲ್ಯದಿಂದ ತೇಜಸ್ವಿನಿ ಮೃತಪಟ್ಟಿದ್ದಾಳೆ.
ಮೃತಳ ಮೂರು ವರ್ಷದ ಮಗು ಏನೂ ಅರಿಯದೇ ಸಂಬಂಧಿಕರ ಮಡಿಲಲ್ಲಿ ಆಟವಾಡುತ್ತಿದ್ದು, ಹತ್ತು ವರ್ಷದ ಬಾಲಕ ತಾಯಿಯ ಸಾವಿನ ವಿಷಯ ತಿಳಿದು ಅಳುತ್ತಿದ್ದ ದೃಶ್ಯಗಳು ಕಣ್ಣೀರು ತರಿಸುವಂತಿವೆ.
ಘಟನೆ ಸಂಬಂಧ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಪೊಲೀಸರು ಸಂದೀಪ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ಹಣ ಮತ್ತು ಮದ್ಯದ ವಿಚಾರಕ್ಕೆ ಗಲಾಟೆಯಾಗಿದ್ದು, ಆಕಸ್ಮಿಕವಾಗಿ ಚಾಕು ತಗುಲಿದೆ ಎಂದು ಸಂದೀಪ್ ಹೇಳಿಕೊಂಡಿದ್ದಾನೆ ಎನ್ನಲಾಗಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದು, ಮಕ್ಕಳ ಭವಿಷ್ಯದ ಬಗ್ಗೆ ಕುಟುಂಬಸ್ಥರು ಚಿಂತೆಯಲ್ಲಿ ಮುಳುಗಿದ್ದಾರೆ.



