ಬೆಂಗಳೂರು: ಬಿಪಿಎಲ್ ಮಾನದಂಡವು ಕೇಂದ್ರ ಸರ್ಕಾರದ ಮಾನದಂಡವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಬಿಪಿಎಲ್ ಮಾನದಂಡದ ಪ್ರಕಾರ ಕ್ರಮ ಆಗಿದೆ. ಬಿಪಿಎಲ್ ಮಾನದಂಡವು ಕೇಂದ್ರ ಸರ್ಕಾರದ ಮಾನದಂಡವಾಗಿದೆ. ಅರ್ಹರಿಗೆ ನ್ಯಾಯ ಸಿಗಬೇಕಲ್ಲವೇ, ಅರ್ಹರಿಗೆ ಅಕ್ಕಿ ಸಿಗುವ ಕೆಲಸ ಮಾಡಲಾಗಿದೆ. ಬಡವರ ದುಡ್ಡು ಬಡವರಿಗೆ ಹೋಗಲಿದೆ. ಮಾನದಂಡ ಬದಲಾವಣೆ ಕೇಂದ್ರ ಸರ್ಕಾರ ಮಾಡಿದರೆ ಮಾಡಲಿ. ಅದನ್ನು ಅನುಸರಿಸುತ್ತೇವೆ ಎಂದರು.
ಇನ್ನೂ 40 ಪರ್ಸೆಂಟ್ ಆರೋಪ ನಿರಾಧಾರ ಎಂದು ಲೋಕಾಯುಕ್ತ ಕ್ಲೀನ್ ಚಿಟ್ ನೀಡಿರುವ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ”40% ನಿರಾಧಾರ ಅನ್ನುವುದಾದರೆ ಕುನ್ಹಾ ಅವರ ಆಯೋಗ ಕ್ರಮಕ್ಕೆ ಯಾಕೆ ಸೂಚಿಸಿದೆ. 300 ರೂ. ಕಿಟ್ಗೆ 2 ಸಾವಿರ ರೂ. ಕೊಟ್ಟು ಖರೀದಿಸಿದ್ದಾರೆ. ಅದು 40% ಸರ್ಕಾರ ಅಲ್ಲ, 400% ಸರ್ಕಾರ.
ಒಂದು ಕೇಸ್ನಲ್ಲಿ ಎಫ್ಐಆರ್ ದಾಖಲಿಸಲು ಆಯೋಗ ಸೂಚಿಸಿದೆ. ಬಿಜೆಪಿಯವರಿಗೆ ಜೈಲಿಗೆ ಹೋಗಲು ಯಾಕಿಷ್ಟು ಅವಸರ. ಉಪಸಮಿತಿ ವರದಿ ಬಂದ ಮೇಲೆ ಕ್ರಮ ಆಗಲಿದೆ. ಈ ಸಂಬಂಧ ಎಸ್ಐಟಿ ರಚನೆಯನ್ನು ಸಿಎಂ ಸಿದ್ದರಾಮಯ್ಯ, ಗೃಹ ಸಚಿವರು ಮಾಡುತ್ತಾರೆ. ಒಳ್ಳೆಯ ಅಧಿಕಾರಿಯನ್ನು ನೇಮಕ ಮಾಡಿ ಎಸ್ಐಟಿ ರಚಿಸುತ್ತಾರೆ’ ಎಂದು ಹೇಳಿದರು.