ಹುಬ್ಬಳ್ಳಿ:- ಸರ್ಕಾರ ದಿವಾಳಿ ಆಗಿರುವುದಕ್ಕೆ BPL ಕಾರ್ಡ್ ಕಡಿತವೇ ಸಾಕ್ಷಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಸರ್ಕಾರ ದಿವಾಳಿಯಾಗುತ್ತಿರುವುದರಿಂದ ಬಿಪಿಎಲ್ ಕಾರ್ಡ್ ಕಡಿತ ಮಾಡಲಾಗುತ್ತಿದೆ. ದಿಢೀರ್ ಆಗಿ ಬಿಪಿಎಲ್ ಕಾರ್ಡ್ ಏಕೆ ಕಡಿತ ಮಾಡುತ್ತಿದೆ ಗೊತ್ತಿಲ್ಲ. ಪ್ಲ್ಯಾನಿಂಗ್ ಇಲ್ಲದೇ ಗ್ಯಾರಂಟಿ ಘೋಷಿಸಿದ್ದೇ ಇಷ್ಟಕ್ಕೆಲ್ಲ ಕಾರಣ ಎಂದು ಕಿಡಿಕಾರಿದ್ದಾರೆ.
ಸಿಎಂ ಸಿದ್ದರಾಮಯ್ಯನವರು ನುಡಿದಂತೆ ನಡೆದಿದ್ದೇವೆ ಅಂತಾರೆ. ಆದರೆ ಒಂದೂ ಗ್ಯಾರಂಟಿ ಸಮರ್ಪಕವಾಗಿ ಜಾರಿಗೆ ತಂದಿಲ್ಲ. ಗ್ಯಾರಂಟಿ ಕೊಡಲು ಆಗದೇ ಬಿಡಲೂ ಆಗದ ಸ್ಥಿತಿ ಸರ್ಕಾರದ್ದು. ಬಹುತೇಕ ಎಲ್ಲ ಗ್ಯಾರಂಟಿಗಳು ಅರ್ಧಕ್ಕೆ ನಿಂತಿವೆ. ಕಾಂಗ್ರೆಸ್ ಸರ್ಕಾರ ಸಂಪೂರ್ಣ ದಿವಾಳಿಯತ್ತ ಮುಖಮಾಡಿದೆ ಎಂದಿದ್ದಾರೆ.
ಸಚಿವ ಮುನಿಯಪ್ಪ ಅವರ ಜೊತೆ ನಾನು ಮಾತಾಡುತ್ತೇನೆ. 2013ರ ಕಾಯ್ದೆ ಪ್ರಕಾರ ನಿಯಮಗಳನ್ನು ಜಾರಿಗೆ ತಂದಿದ್ದೇವೆ. 5 ಕೆ.ಜಿ ಧಾನ್ಯವನ್ನು ಸಂಪೂರ್ಣ ಉಚಿತವಾಗಿ ಕೊಡುತ್ತಿದ್ದೇವೆ. ಕನಿಷ್ಠ ಬೆಂಬಲ ಬೆಲೆಯಡಿ ಗೋಧಿ, ಭತ್ತ ಇತ್ಯಾದಿಗಳನ್ನು ಖರೀದಿಸುತ್ತಿದ್ದೇವೆ. ಜೊತೆಗೆ ದರ ಕುಸಿತವಾಗುವ ಕೃಷಿ ಉತ್ಪನ್ನಗಳನ್ನು ಖರೀದಿಸುತ್ತಿದ್ದೇವೆ. ಇಷ್ಟೆಲ್ಲ ಕೇಂದ್ರ ಸರ್ಕಾರ ಮಾಡುತ್ತಿದ್ದರೂ ರಾಜ್ಯ ಸರ್ಕಾರ ಕಾರ್ಡ್ ಯಾಕೆ ಕಡಿತ ಮಾಡುತ್ತಿದೆಯೋ ಗೊತ್ತಿಲ್ಲ. ಬಡವರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.