ಬೆಂಗಳೂರು: BPL ಕಾರ್ಡ್ ಅನ್ನು ರದ್ದು ಮಾಡಿಲ್ಲ, ಬದಲಾಯಿಸಿದ್ದೇವೆ ಅಷ್ಟೇ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಎಂ. ಲಕ್ಷ್ಮಣ್ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ರದ್ದತಿ ಬಗ್ಗೆ ಜನರಲ್ಲಿ ಗೊಂದಲ ಸೃಷ್ಟಿ ಮಾಡುತ್ತಿದೆ. ಬಿಪಿಎಲ್ ಕಾರ್ಡ್ ಅನ್ನು ರದ್ದು ಮಾಡಿಲ್ಲ, ಬದಲಾಯಿಸಿದ್ದೇವೆ ಅಷ್ಟೇ.
ಆದರೆ ಬಿಜೆಪಿಯವರು ರಾಜ್ಯದ ಜನರಿಗೆ ಈ ವಿಚಾರದಲ್ಲಿ ಗೊಂದಲ ಉಂಟು ಮಾಡುತ್ತಿದ್ದಾರೆ ಎಂದು ಹೇಳಿದರು. ಇನ್ನೂ ಬಿಪಿಎಲ್ನಿಂದ ಎಪಿಎಲ್ಗೆ ವರ್ಗಾವಣೆ ಮಾಡಲು ಐದು ಮಾನದಂಡಗಳನ್ನು ಕೇಂದ್ರ ಸರ್ಕಾರ ನೀಡಿದೆ. ಅದರಲ್ಲಿ ಐಟಿ ರಿಟರ್ನ್ಸ್ ಆಗಿರಬಾರದು. 8 ಎಕರೆಗಿಂತ ಹೆಚ್ಚು ಜಮೀನು ಇರಬಾರದು. ಕಾರು ಹೊಂದಿರಬಾರದು.
ಜತೆಗೆ ವಾರ್ಷಿಕ ವರಮಾನ 2 ಲಕ್ಷ ರೂ. ಮೀರುವಂತೆ ಇರಬಾರದು ಎಂಬ ಮಾನದಂಡದಲ್ಲಿ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡುವಂತೆ ರಾಜ್ಯಕ್ಕೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ರಾಜ್ಯ ಸರ್ಕಾರ 80 ಸಾವಿರ ಬಿಪಿಎಲ್ ಕಾರ್ಡ್ಗಳನ್ನ ಎಪಿಎಲ್ ಕಾರ್ಡ್ಗಳಾಗಿ ಪರಿವರ್ತನೆ ಮಾಡಿದೆ. ಇದನ್ನೇ ಇಟ್ಟುಕೊಂಡು ಬಿಜೆಪಿಯವರು ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.