ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ವರ್ತಮಾನ ಸಮಯದಲ್ಲಿ ಜಾತಿ-ಬೇಧಗಳಿಂದ ಮುಕ್ತರಾಗಿ ಉನ್ನತ ಜೀವನವನ್ನು ನಡೆಸುವ ಆಧ್ಯಾತ್ಮಿಕತೆಯ ಮಾರ್ಗವಾಗಿದೆ ಎಂದು ಕಾನಿಪ ಸಂಘದ ಜಿಲ್ಲಾ ಉಪಾಧ್ಯಕ್ಷ ಪ್ರಭುಸ್ವಾಮಿ ಅರವಟಗಿಮಠ ಹೇಳಿದರು.
ಪಟ್ಟಣದ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಸೋಮವಾರ ನಡೆದ ಬ್ರಹ್ಮ ಭೋಜನ ಹಾಗೂ ಈಶ್ವರೀಯ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಸ್ತಿ ಎಷ್ಟಿದ್ದರೇನು, ಮನುಷ್ಯನಿಗೆ ಅಗತ್ಯವಿರುವುದು ನೆಮ್ಮದಿ ಮತ್ತು ಮನಃಶಾಂತಿ. ಈಶ್ವರೀಯ ವಿಶ್ವವಿದ್ಯಾಲಯಗಳು ಮನುಷ್ಯನಲ್ಲಿ ಮನಃಶಾಂತಿ ತುಂಬುತ್ತಿವೆ. ನಾಮ ಹಲವಾದರೂ, ದೇವನೊಬ್ಬನೇ ಎಂಬ ತತ್ವದಡಿ ಮುನ್ನಡೆಯುತ್ತಿವೆ. ಮಹಿಳೆಯರ ನೇತೃತ್ವದಲ್ಲಿ ವಿಶ್ವಶಾಂತಿಗಾಗಿ ಕೆಲಸ ಮಾಡುತ್ತಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಜಗತ್ತಿನ ಯಾವುದೇ ಶಾಖೆಗೆ ಭೇಟಿ ನೀಡಿದರೂ ಅಧ್ಯಾತ್ಮ ಹಾಗೂ ನೆಮ್ಮದಿ ದೊರೆಯುತ್ತದೆ ಎಂದರು.
ವಿಶ್ವವಿದ್ಯಾಲಯದ ಸಂಚಾಲಕಿ ಬಿ.ಕೆ. ಸವಿತಕ್ಕ ಸಂದೇಶ ನೀಡಿ, ಎಲ್ಲ ಧರ್ಮಗಳೂ ಪರಮಾತ್ಮನನ್ನು ಜ್ಯೋತಿ ರೂಪದಲ್ಲಿ ಕಾಣುತ್ತವೆ. ಅಂತಹ ಜ್ಯೋತಿಯು ನಮ್ಮ ಆತ್ಮದ ಜೊತೆ ಅನುಸಂಧಾನ ಹೊಂದಬೇಕು. ಹೊರಗಿನ ಸಂಪತ್ತಿನ ಬದಲಾಗಿ, ಆಂತರಿಕ ಶಾಂತಿ ಮತ್ತು ಸಂತೃಪ್ತಿಯನ್ನು ಸಾಧಿಸುವುದೇ ಮುಖ್ಯ. ಆಧ್ಯಾತ್ಮದಿಂದ ಆಂತರಿಕ ಸಶಕ್ತೀಕರಣ ಸಾಧ್ಯವಾಗುತ್ತದೆ ಎಂದರು.
ಪತ್ರಕರ್ತ ಈಶ್ವರ ಬೆಟಗೇರಿ ಮಾತನಾಡಿದರು. ಕಾರ್ಯಕ್ರಮವನ್ನು ಕಾನಿಪ ಸಂಘದ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಆದರ್ಶ ಕುಲಕರ್ಣಿ ಉದ್ಘಾಟಿಸಿದರು. ಕಾನಿಪ ಸಂಘದ ಪದಾಧಿಕಾರಿಗಳಿಗೆ ಸನ್ಮಾನ ಜರುಗಿತು. ಕಾನಿಪ ತಾಲೂಕ ಉಪಾಧ್ಯಕ್ಷ ಮಲ್ಲಯ್ಯ ಗುಂಡಗೋಪುರಮಠ, ಕಾರ್ಯದರ್ಶಿ ಸಂಗಮೇಶ ಮೆಣಸಿಗಿ, ಗವಿಸಿದ್ದಪ್ಪ ಗೊಡಚಪ್ಪನವರ, ಹುಚ್ಚಿರಪ್ಪ ಈಟಿ, ಎಂ.ಎಸ್. ಪೂಜಾರ, ಬಿ.ವಿ. ದೇಸಾಯಿಪಟ್ಟಿ, ಎಸ್.ಕೆ. ಪ್ರಭುಸ್ವಾಮಿಮಠ, ಮಲ್ಲಣ್ಣ ಕಾತರಕಿ, ವೀರಣ್ಣ ಹತ್ತಿಕಟಗಿ, ಹನಮಂತ ರಾಚನಗೌಡ್ರ, ರಾಮಣ್ಣ ಕುಲಕರ್ಣಿ ಸೇರಿದಂತೆ ಈಶ್ವರೀಯ ಪರಿವಾರದವರಿದ್ದರು.



