ಟಿವಿ ಲೋಕದಲ್ಲಿ ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿರುವ ನಡುವೆಯೇ ಇದೀಗ ಕಿರುತೆರೆ ನಟಿ ಅನುಷಾ ಹೆಗಡೆ ದಾಂಪತ್ಯಕ್ಕೂ ಅಂತ್ಯ ಬಂದಿದೆ. ಅನುಷಾ ಹೆಗಡೆ ಅವರು ತಮ್ಮ ಪತಿ ಪ್ರತಾಪ್ ಸಿಂಗ್ ಅವರಿಂದ ಅಧಿಕೃತವಾಗಿ ವಿಚ್ಛೇದನ ಪಡೆದಿರುವುದನ್ನು ಸಾಮಾಜಿಕ ಜಾಲತಾಣದ ಮೂಲಕ ಪ್ರಕಟಿಸಿದ್ದಾರೆ.
‘ರಾಧಾ ರಮಣ’ ಧಾರಾವಾಹಿಯ ದೀಪಿಕಾ ಪಾತ್ರದಿಂದ ಮನೆಮಾತಾಗಿದ್ದ ಅನುಷಾ ಹೆಗಡೆ, ನಂತರ ತೆಲುಗು ಮತ್ತು ಕನ್ನಡ ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು. ತೆಲುಗಿನ ‘ನಿನ್ನೆ ಪೆಳ್ಳಾಡತಾ’ ಧಾರಾವಾಹಿಯಲ್ಲಿ ನಟಿಸುವಾಗಲೇ ಪ್ರತಾಪ್ ಸಿಂಗ್ ಅವರೊಂದಿಗೆ ಪ್ರೀತಿ ಬೆಳೆದು, ಇಬ್ಬರೂ ವಿವಾಹವಾಗಿದ್ದರು.
2020ರ ಫೆಬ್ರವರಿಯಲ್ಲಿ ಹೈದರಾಬಾದ್‌ನ ತಾರಮತಿ ಬಾರಾದಾರಿ ಅರಮನೆಯಲ್ಲಿ ಅದ್ಧೂರಿಯಾಗಿ ನಡೆದ ಈ ಮದುವೆ ಭಾರಿ ಸುದ್ದಿಯಾಗಿತ್ತು. ಐದು ಗಂಟೆಗಳ ಕಾಲ ನಡೆದ ವಿವಾಹ ಶಾಸ್ತ್ರಗಳು ಆ ಸಮಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದವು. ಆದರೆ ಅದೇ ಸಂಬಂಧ ಇದೀಗ ಕೇವಲ ಆರು ವರ್ಷಗಳಲ್ಲಿ ಅಂತ್ಯ ಕಂಡಿದೆ.
2023ರಿಂದಲೇ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿಗಳು ಹರಿದಾಡುತ್ತಿದ್ದರೂ, ಅನುಷಾ ಅಧಿಕೃತವಾಗಿ ಸ್ಪಷ್ಟನೆ ನೀಡಿರಲಿಲ್ಲ. ಇದೀಗ ಇನ್ಸ್ಟಾಗ್ರಾಂನಲ್ಲಿ,
“2023ರಿಂದ ಸಮಸ್ಯೆಗಳು ಆರಂಭವಾಗಿದ್ದು, 2025ರಲ್ಲಿ ಕಾನೂನಾತ್ಮಕವಾಗಿ ವಿಚ್ಛೇದನ ಪಡೆದಿದ್ದೇವೆ” ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಈ ವಿಚಾರವನ್ನು ಮುಂದುವರೆಸಿ ಚರ್ಚಿಸುವ ಆಸಕ್ತಿ ಇಲ್ಲ ಎಂದು ಹೇಳಿದ್ದಾರೆ.
ಅನುಷಾ ಹೆಗಡೆ ಅವರ ವೃತ್ತಿಜೀವನದ ಕುರಿತು ಹೇಳುವುದಾದರೆ, 2016ರಲ್ಲಿ ‘ಎನ್ಎಚ್ 37’ ಸಿನಿಮಾದಲ್ಲಿ ಅಭಿನಯ, ‘ಬಣ್ಣ ಬಣ್ಣದ ಬದುಕು’ ಸಿನಿಮಾಕ್ಕೆ ನೃತ್ಯ ನಿರ್ದೇಶನ, 2017ರಲ್ಲಿ ‘ರಾಧಾ ರಮಣ’, 2018ರಲ್ಲಿ ‘ನಿನ್ನೇ ಪೆಲ್ಲಾಡುತಾ’, 2019ರಲ್ಲಿ ‘ಸೂರ್ಯಕಾಂತಂ’, 2022ರಲ್ಲಿ ‘ಆನಂದ ರಾಗಂ’ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಪ್ರಸ್ತುತ ಕನ್ನಡದ ‘ಅನು ಪಲ್ಲವಿ’ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ.



