ಬೆಂಗಳೂರು: ರಾಜ್ಯಾದ್ಯಂತ ‘ಪನೀರ್’ ಹೆಸರಿನಲ್ಲಿ ಮಾರಾಟವಾಗುತ್ತಿರುವ ಕೃತಕ (ಅನಲಾಗ್) ಪನೀರ್‌ನ ತಯಾರಿಕೆ, ಸಂಗ್ರಹಣೆ, ವಿತರಣೆ ಮತ್ತು ಮಾರಾಟವನ್ನು ಒಂದು ವರ್ಷದ ಅವಧಿಗೆ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸಾರ್ವಜನಿಕ ಆರೋಗ್ಯ ಮತ್ತು ಗ್ರಾಹಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಹಾರ ಸುರಕ್ಷತೆ ವಿಭಾಗ ಈ ನಿರ್ಧಾರ ಕೈಗೊಂಡಿದೆ.
ಅನಲಾಗ್ ಅಥವಾ ನಾನ್-ಡೈರಿ ಪನೀರ್‌ನ ಉತ್ಪಾದನೆ, ಸಂಸ್ಕರಣೆ, ಪ್ಯಾಕಿಂಗ್, ಸಂಗ್ರಹಣೆ, ವಿತರಣೆ, ಸಾಗಣೆ, ಸಗಟು ಹಾಗೂ ಚಿಲ್ಲರೆ ಮಾರಾಟ, ಪ್ರದರ್ಶನ ಮತ್ತು ಸರ್ಕಾರಿ ಪೂರೈಕೆಯನ್ನು ಕರ್ನಾಟಕ ರಾಜ್ಯಾದ್ಯಂತ ಒಂದು ವರ್ಷದ ಮಟ್ಟಿಗೆ ನಿಷೇಧಿಸಿ ಆಗಸ್ಟ್ 17ರಂದು ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006ರ ಕಲಂ 30(2)(a), 18 ಮತ್ತು 29ರ ಅಡಿಯಲ್ಲಿ ಈ ಆದೇಶ ಜಾರಿಗೊಳಿಸಲಾಗಿದೆ. ಇದೇ ಕಾಯ್ದೆಯ 2011ರ ನಿಯಮ, Regulation 2.1.16ರ ಪ್ರಕಾರ ಪನೀರ್ ಎಂಬುದು ಹಾಲಿನಿಂದ ತಯಾರಿಸಲಾದ ಪ್ರಮಾಣೀಕೃತ ಆಹಾರ ಉತ್ಪನ್ನವಾಗಿದ್ದು, ಹಾಲಿನ ಕೊಬ್ಬು ಅದರ ಪ್ರಮುಖ ಅಂಶ. ಇದರ ಬದಲಿಗೆ ಅಥವಾ ಜೊತೆಗೆ ಸಸ್ಯಜನ್ಯ ಎಣ್ಣೆ, ಸಸ್ಯಜನ್ಯ ಕೊಬ್ಬು ಅಥವಾ ಇತರೆ ನಾನ್-ಡೈರಿ ಪದಾರ್ಥಗಳ ಬಳಕೆಗೆ ಅವಕಾಶವಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ರಾಜ್ಯದಲ್ಲಿ ಸಂಗ್ರಹಿಸಲಾದ ಹಲವು ಪನೀರ್ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಯಾವುದೇ ಕಲಬೆರಕೆ ಪತ್ತೆಯಾಗಿಲ್ಲ. ಆದರೆ ಕಲಬೆರಕೆ ಇಲ್ಲದಿದ್ದರೂ, ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಈ ಉತ್ಪನ್ನಗಳ ಬಳಕೆ, ಸಂಗ್ರಹಣೆ, ಪೂರೈಕೆ, ಮಾರಾಟ ಅಥವಾ ಸಾಗಣೆಯನ್ನು ನಿಷೇಧಿಸಲಾಗಿದೆ ಎಂದು ಇಲಾಖೆ ಹೇಳಿದೆ.
ಹಾಲಿನ ಕೊಬ್ಬು ಅಥವಾ ಹಾಲಿನ ಘನಾಂಶವನ್ನು ಸಂಪೂರ್ಣವಾಗಿ ಅಥವಾ ಭಾಗಶಃ ಸಸ್ಯಜನ್ಯ ಎಣ್ಣೆ, ಸಸ್ಯಜನ್ಯ ಕೊಬ್ಬು ಅಥವಾ ಇತರೆ ನಾನ್-ಡೈರಿ ಪದಾರ್ಥಗಳಿಂದ ಬದಲಾಯಿಸಿ ಪನೀರ್‌ನಂತೆ ತಯಾರಿಸಲಾದ ಉತ್ಪನ್ನವನ್ನೇ ಅನಲಾಗ್ ಅಥವಾ ನಾನ್-ಡೈರಿ ಪನೀರ್ ಎಂದು ಪರಿಗಣಿಸಲಾಗುತ್ತದೆ. ಇಂತಹ ಉತ್ಪನ್ನಗಳನ್ನು ಪನೀರ್ ಎಂಬ ಹೆಸರಿನಲ್ಲಿ ಮಾರಾಟ ಮಾಡುವಂತಿಲ್ಲ ಅಥವಾ ಗ್ರಾಹಕರಿಗೆ ಪನೀರ್ ಎಂದು ಬಿಂಬಿಸುವಂತಿಲ್ಲ ಎಂದು ಇಲಾಖೆ ತಿಳಿಸಿದೆ.
ಈ ನಿಷೇಧ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ನಿಗದಿಪಡಿಸದ ಮತ್ತು ಪ್ರಮಾಣೀಕರಿಸದ ಡೈರಿ ಅನಲಾಗ್ ಉತ್ಪನ್ನಗಳಿಗೆ ಮಾತ್ರ ಅನ್ವಯಿಸುತ್ತದೆ. ಈಗಾಗಲೇ ಪ್ರತ್ಯೇಕ ಮಾನದಂಡ ಹೊಂದಿರುವ Frozen Dessert, Processed Cheese ಮತ್ತು Mixed Fat Spread ನಂತಹ ಪ್ರಮಾಣೀಕೃತ ಉತ್ಪನ್ನಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಯಾವುದೇ ಆಹಾರ ವ್ಯವಹಾರ ಸಂಸ್ಥೆ ಕೃತಕ (ಅನಲಾಗ್) ಪನೀರ್ ಅನ್ನು ಇತರೆ ಆಹಾರ ಉತ್ಪನ್ನ ಅಥವಾ ಪದಾರ್ಥ ತಯಾರಿಕೆಯಲ್ಲಿ ಬಳಸುವುದು, ಸಂಗ್ರಹಿಸುವುದು, ಪೂರೈಸುವುದು ಅಥವಾ ಮಾರಾಟ ಮಾಡುವುದನ್ನೂ ನಿಷೇಧಿಸಲಾಗಿದೆ. ಆದೇಶದ ಪರಿಣಾಮಕಾರಿ ಅನುಷ್ಠಾನಕ್ಕಾಗಿ ರಾಜ್ಯಾದ್ಯಂತ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಸುರಕ್ಷತೆ ವಿಭಾಗದ ಆಯುಕ್ತರು ತಿಳಿಸಿದ್ದಾರೆ. ಸಾರ್ವಜನಿಕರು ಮತ್ತು ಆಹಾರ ವ್ಯವಹಾರ ನಿರ್ವಾಹಕರು ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಇಲಾಖೆ ಸೂಚಿಸಿದೆ.



