ಝಾನ್ಸಿ:- ಉತ್ತರ ಪ್ರದೇಶದ ಝಾನ್ಸಿಯಲ್ಲಿ ವ್ಯಕ್ತಿಯೊಬ್ಬ ಕ್ರಿಕೆಟ್ ಆಡುವಾಗ ಕುಸಿದುಬಿದ್ದು ಸಾವನ್ನಪ್ಪಿರುವ ಘಟನೆ ಜರುಗಿದೆ.
ರವೀಂದ್ರ ಅಹಿರ್ವಾರ್ ಮೃತ ವ್ಯಕ್ತಿ. ಇವರು ಪಂದ್ಯದ ಸಮಯದಲ್ಲಿ ಬೌಲಿಂಗ್ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಅಸ್ವಸ್ಥರಾದರು, ನೀರು ಕುಡಿದ ನಂತರ ವಾಂತಿ ಮಾಡಿಕೊಂಡರು ಮತ್ತು ಪ್ರಜ್ಞೆ ಕಳೆದುಕೊಂಡರು. ಬಳಿಕ ಆಸ್ಪತ್ರೆಗೆ ಸೇರಿಸಿದಾಗ ಅವರು ಮೃತಪಟ್ಟಿದ್ದಾರೆ.
ರವೀಂದ್ರ ಆರೋಗ್ಯವಾಗಿಯೇ ಇದ್ದರು, ಬೆಳಗ್ಗೆ ಬೇಗ ಎಚ್ಚರವಾಗಿತ್ತು ಎಂದು ತಂದೆಯೊಂದಿಗೆ ಚಹಾ ಸೇವಿಸಿದ್ದರು. ಬಳಿಕ ಅವರು ಕ್ರಿಕೆಟ್ ಆಡಲು ಜಿಐಸಿ ಮೈದಾನಕ್ಕೆ ಹೋದರು. ಸುಮಾರು ಒಂದು ಗಂಟೆಯ ನಂತರ, ಅವರ ಆರೋಗ್ಯ ಹದಗೆಟ್ಟಿದೆ.
ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೂ ಯಾವುದೇ ಪ್ರಯೋಜನವಾಗಲಿಲ್ಲ. ಮೂವರು ಸಹೋದರರಲ್ಲಿ ಎರಡನೆಯವರಾದ ರವೀಂದ್ರ ಎರಡು ವರ್ಷಗಳ ಹಿಂದೆ ಎಲ್‌ಐಸಿಯಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಸೇರಿದ್ದರು. ಅವರಿಗೆ ಕೆಲಸ ಮತ್ತು ಕ್ರಿಕೆಟ್ ಎರಡರ ಬಗ್ಗೆಯೂ ಅಪಾರ ಒಲವು ಇತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ.


