ಬೆಂಗಳೂರು: ಬಂಡೆಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಮಂಗಮ್ಮನ ಪಾಳ್ಯದಲ್ಲಿ ರೌಡಿಶೀಟರ್ ಓರ್ವನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಕೊಲೆಯಾದ ವ್ಯಕ್ತಿಯನ್ನು ಶಬ್ಬೀರ್ ಎಂದು ಗುರುತಿಸಲಾಗಿದೆ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ರಾತ್ರಿ ಸ್ನೇಹಿತರನ್ನು ಭೇಟಿಯಾಗಲು ಬಂದಿದ್ದ ಶಬ್ಬೀರ್ ಮೇಲೆ ಆಟೋದಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಬಂಡೆಪಾಳ್ಯ ಮುಖ್ಯ ರಸ್ತೆಯ ಪಕ್ಕದ ಪೊಲೀಸ್ ಠಾಣೆಗೆ ಸಮೀಪದಲ್ಲೇ ಈ ಘಟನೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.
ಮಂಗಮ್ಮನ ಪಾಳ್ಯ ರಸ್ತೆಯಲ್ಲಿ ಶಬ್ಬೀರ್‌ನನ್ನು ಆಟ್ಟಾಡಿಸಿ, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ. ಮಾಹಿತಿ ಪಡೆದ ಬಂಡೆಪಾಳ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.



