ಗದಗ: ಗದಗ ಶಹರ ಪೊಲೀಸ್ ಠಾಣೆಯ ಎಎಸ್‌ಐ ಸಿ.ವೈ. ಇಂಗಳಹಳ್ಳಿ ಅವರು ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರಿಂದ ರೆಡ್‌ಹ್ಯಾಂಡ್ ಆಗಿ ಬಂಧಿತರಾದ ಘಟನೆ ನಡೆದಿದೆ.
ಗದಗ ನಗರದ ಹುಡ್ಕೊ ಕಾಲೋನಿಯ ನಿವಾಸಿ ಕು. ವೀರೇಶ (ತಂದೆ: ದಿ. ವೆಂಕಟೇಶ ಪೂಜಾರ) ಅವರು ಗದಗ ಲೋಕಾಯುಕ್ತ ಪೊಲೀಸ್ ಠಾಣೆಗೆ ಗಣಕೀಕೃತ ದೂರು ಸಲ್ಲಿಸಿದ್ದರು. ದೂರಿನ ಪ್ರಕಾರ, ಅವರ ತಾಯಿಯ ವಿರುದ್ಧ ಅನಾಮಧೇಯ ವ್ಯಕ್ತಿಗಳಿಂದ ಹೆಸರು ಹಾಗೂ ಸಹಿ ಇಲ್ಲದೆ ಸಲ್ಲಿಸಲಾದ ಅರ್ಜಿಯನ್ನು ವಜಾಗೊಳಿಸುವುದಾಗಿ ಹೇಳಿ ಎಎಸ್‌ಐ ಇಂಗಳಹಳ್ಳಿ ಅವರು ಮೊದಲಿಗೆ ₹13 ಸಾವಿರ ಲಂಚ ಬೇಡಿಕೆ ಇಟ್ಟಿದ್ದರು. ಬಳಿಕ ₹10 ಸಾವಿರ ನೀಡುವಂತೆ ಒತ್ತಾಯಿಸಿದ್ದರು ಎನ್ನಲಾಗಿದೆ.
ಲಂಚ ನೀಡಲು ಸಾಧ್ಯವಿಲ್ಲದ ಹಿನ್ನೆಲೆ ವೀರೇಶ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಅದರ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡು ಬಲೆ ಬೀಸಿದ ಲೋಕಾಯುಕ್ತ ಅಧಿಕಾರಿಗಳು, ಫೆಬ್ರವರಿ 25ರಂದು ಪಿರ್ಯಾದುದಾರರಿಂದ ₹10 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಆರೋಪಿಯನ್ನು ರೆಡ್‌ಹ್ಯಾಂಡ್ ಆಗಿ ಬಂಧಿಸಿದರು.
ಈ ಕಾರ್ಯಾಚರಣೆ ಧಾರವಾಡ ವಿಭಾಗದ ಲೋಕಾಯುಕ್ತ ಎಸ್ಪಿ ಎಸ್.ಟಿ. ಸಿದ್ದಲಿಂಗಪ್ಪ ಅವರ ಮಾರ್ಗದರ್ಶನದಲ್ಲಿ ನಡೆಯಿತು. ಗದಗ ವಿಭಾಗದ ಡಿವೈಎಸ್ಪಿ ವಿಜಯ್ ಬಿರಾದಾರ ನೇತೃತ್ವದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಪರಮೇಶ ಕವಟಗಿ, ಶ್ರೀಮತಿ ಎಸ್.ಎಸ್. ತೇಲಿ ಹಾಗೂ ಸಿಬ್ಬಂದಿಗಳಾದ ಎಂ.ಎಂ. ಅಯ್ಯನಗೌಡ್ರ, ಯು.ಎನ್. ಸಂಗನಾಳ, ನೀಲಕಂಠ ಅಂಬಿಗೇರ, ಮುತರೆಡ್ಡಿ ಬಾರಡ್ಡಿ, ಹಸನ್ ದೇಪೂರವಾಲಾ, ಟಿ.ಎನ್. ಜವಳಿ, ಎಂ.ಆರ್. ಹಿರೇಮಠ, ಎಸ್.ವಿ. ನೈನಾಪೂರ ಹಾಗೂ ಇರ್ಪಾನ್ ಸೈಪಣ್ಣವರ್ ಈ ದಾಳಿಯಲ್ಲಿ ಭಾಗವಹಿಸಿದ್ದರು.



