ಗದಗ:- ಶಾಲೆಗಳಲ್ಲಿ ವಿದ್ಯಾರ್ಥಿನಿಯರ ಸುರಕ್ಷತೆ ಹಾಗೂ ಆತ್ಮವಿಶ್ವಾಸ ವೃದ್ಧಿಗಾಗಿ ನಡೆಯಬೇಕಾದ ಕರಾಟೆ ತರಬೇತಿ ಕಾರ್ಯಕ್ರಮವನ್ನೇ ಲಂಚದ ದಂಧೆಗೆ ಬಳಸಿಕೊಂಡಿರುವ ಘಟನೆ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಮುಶಿಗೇರಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ರೋಣ ಬಿಇಒ ಕಚೇರಿ ವ್ಯಾಪ್ತಿಯ ಮುಶಿಗೇರಿ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಯ ಉಪ ಪ್ರಾಂಶುಪಾಲ ಹಾಗೂ ಮುಖೋಪಾಧ್ಯಾಯರಾದ ಕಳಕಪ್ಪ ಸಿದ್ದಪ್ಪ ರಾಜೂರು ಅವರು, ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ ನೀಡಿದ ಗೌರವಧನ ಮಂಜೂರಿಗಾಗಿ ಲಂಚ ಬೇಡಿಕೆ ಇಟ್ಟು ರೂ.4,000 ಸ್ವೀಕರಿಸುವ ವೇಳೆ ಕರ್ನಾಟಕ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ.
ಗದಗದ ಆನಂದ ವಿರುಪಾಕ್ಷಪ್ಪ ವಾಲ್ಮೀಕಿ ಎಂಬವರು ನೀಡಿದ ದೂರಿನ ಮೇರೆಗೆ ಡಿಸೆಂಬರ್ 22ರಂದು ರೂಪಿಸಿದ ಬಲೆಗೆ ರಾಜೂರು ಸಿಲುಕಿದ್ದು, ಲಂಚದ ಹಣವನ್ನು ಸ್ವೀಕರಿಸುವ ಕ್ಷಣದಲ್ಲೇ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಅವರನ್ನು ಬಂಧಿಸಿದ್ದಾರೆ.
ಈ ಕಾರ್ಯಾಚರಣೆ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಸ್.ಟಿ. ಸಿದ್ದಲಿಂಗಪ್ಪ ಅವರ ಮಾರ್ಗದರ್ಶನದಲ್ಲಿ ನಡೆಯಿತು. ಗದಗ ಲೋಕಾಯುಕ್ತ ಕಚೇರಿಯ ಪೊಲೀಸ್ ಉಪಾಧೀಕ್ಷಕ ವಿಜಯ್ ಬಿರಾದಾರ್, ಪೊಲೀಸ್ ನಿರೀಕ್ಷಕ ಪರಮೇಶ್ವರ ಜಿ. ಕವಟಗಿ ನೇತೃತ್ವದಲ್ಲಿ ಸಿಬ್ಬಂದಿಗಳ ತಂಡ ದಾಳಿ ನಡೆಸಿತು. ತಂಡದಲ್ಲಿ ಸಿಹೆಚ್‌ಸಿ ಎಮ್.ಎಮ್. ಅಯ್ಯನಗೌಡರ್, ವಿ.ಎಸ್. ದೀಪಾಲಿ, ಯು.ಎನ್. ಸಂಗನಾಳ, ಸಿಪಿಸಿ ಹೆಚ್.ಐ. ದೇಪುರವಾಲಾ, ಎಮ್.ಬಿ. ಬಾರಡ್ಡಿ, ಪಿ.ಎಲ್. ಪಿರಿಮಾಳ, ಎಪಿಸಿ ಎಸ್.ವಿ. ನೈನಾಪೂರ ಹಾಗೂ ಎಮ್.ಆರ್. ಹಿರೇಮಠ ಸೇರಿದಂತೆ ಹಲವು ಸಿಬ್ಬಂದಿಗಳು ಭಾಗವಹಿಸಿದ್ದರು.
ಗದಗ ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.



