ಗದಗ:- ಲಂಚ ಪ್ರಕರಣದಲ್ಲಿ ರೋಣ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್‌ನನ್ನು ಬಂಧಿಸುವಲ್ಲಿ ಗದಗ ಲೋಕಾಯುಕ್ತ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಹೇಶ ರಾಠೋಡ ಬಂಧಿತ ಆರೋಪಿ. ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ತಂಗಡಗಿ ಗ್ರಾಮದ ನಿವಾಸಿ ಶರಣಪ್ಪ ಕೊಟ್ಟ ದೂರಿನ ಮೇರೆಗೆ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ.
ಏನಿದು ಪ್ರಕರಣ?
ದೂರುದಾರ ಶರಣಪ್ಪ ದ್ವಿತೀಯ ದರ್ಜೆ ಗುತ್ತಿಗೆದಾರರಾಗಿದ್ದು, ರೋಣ ತಾಲೂಕಿನಲ್ಲಿ ಒಂದು ಕಾಮಗಾರಿಯ ಗುತ್ತಿಗೆಯನ್ನು ಆನ್‌ಲೈನ್ ಮೂಲಕ ಪಡೆದು 34 ಲಕ್ಷ ರೂ. ಮೌಲ್ಯದ ಕೆಲಸವನ್ನು ಆರು ತಿಂಗಳ ಹಿಂದೆ ಪೂರ್ಣಗೊಳಿಸಿದ್ದಾರೆ. ಆದರೆ, ಕಾಮಗಾರಿಯ ಬಿಲ್ ಪಾವತಿಗಾಗಿ ರೋಣ ಲೋಕೋಪಯೋಗಿ ಉಪ ವಿಭಾಗದ ಸಹಾಯಕ ಇಂಜಿನಿಯರ್ ಮಹೇಶ ರಾಠೋಡ ಇವರು 4,60,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ.
ಈ ದೂರಿನ ಆಧಾರದ ಮೇಲೆ, ಗದಗ ಲೋಕಾಯುಕ್ತ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ, ಗಜೇಂದ್ರಗಡದ ಬಂಡಿ ಪೆಟ್ರೋಲ್ ಬಂಕ್ ಸಮೀಪದ ಬಯಲು ಜಾಗದಲ್ಲಿ ಯೋಜಿತ ಕಾರ್ಯಾಚರಣೆ ನಡೆಸಿದರು. ಈ ವೇಳೆ ಆರೋಪಿ ಮಹೇಶ ರಾಠೋಡ ದೂರುದಾರರಿಂದ 3 ಲಕ್ಷ ಮುಂಗಡ ಲಂಚ ಸ್ವೀಕರಿಸುವಾಗ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.
ಈ ಯಶಸ್ವಿ ಕಾರ್ಯಾಚರಣೆಯನ್ನು ಲೋಕಾಯುಕ್ತ ಧಾರವಾಡದ ಪೊಲೀಸ್ ಅಧೀಕ್ಷಕ ಎಸ್.ಟಿ. ಸಿದ್ಧಲಿಂಗಪ್ಪ ಅವರ ಮಾರ್ಗದರ್ಶನದಲ್ಲಿ, ಗದಗ ಉಪಾಧೀಕ್ಷಕ ವಿಜಯ ಬಿರಾದಾರ ಅವರ ನೇತೃತ್ವದಲ್ಲಿ ನಡೆಸಲಾಯಿತು. ಇನ್ಸ್‌ಪೆಕ್ಟರ್‌ಗಳಾದ ಶ್ರೀಮತಿ ಎಸ್.ಎಸ್. ತೇಲಿ ಮತ್ತು ಪರಮೇಶ್ವರ ಕವಟಗಿ, ಸಿಬ್ಬಂದಿಗಳಾದ ಎಮ್.ಎಮ್. ಅಯ್ಯನಗೌಡ್ರ, ವಿ.ಎಸ್. ದೀಪಾಲಿ, ಯು.ಎನ್. ಸಂಗನಾಳ, ಎನ್.ಪಿ. ಅಂಬಿಗೇರ, ಎಮ್.ಬಿ. ಬಾರಡ್ಡಿ, ಎಮ್.ಎಸ್. ದಿಡಗೂರ, ಹೆಚ್.ಐ. ದೇಪುರವಾಲಾ, ಪ್ರಸಾದ ಪಿರಿಮಳ, ಎಸ್.ಎ. ನೈನಾಪುರ, ಎಮ್.ಆರ್. ಹಿರೇಮಠ ಮತ್ತು ಇರ್ಫಾನ್ ಸೈಫಣ್ಣವರ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.