ಬೆಂಗಳೂರು: ಗ್ರೇಟರ್ ಬೆಂಗಳೂರು ಪಾಲಿಕೆಯಲ್ಲಿ ಇ-ಖಾತಾ ಪ್ರಕ್ರಿಯೆಯಲ್ಲಿ ಲಂಚಾವತಾರ ನಡೆಯುತ್ತಿದೆ ಎಂದು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಆರೋಪಕ್ಕೆ ಸಾಕ್ಷಿಯಾಗಿ ಸದನದಲ್ಲೇ ಫೋನ್ ಪೇ ಹಣ ವರ್ಗಾವಣೆಯ ದಾಖಲೆಗಳನ್ನು ಪ್ರದರ್ಶಿಸಿದರು.
ರಾಜ್ಯ ಸರ್ಕಾರದಲ್ಲಿ ಲಂಚವಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದನ್ನು ಉಲ್ಲೇಖಿಸಿದ ಅಶೋಕ್, “ಇಲ್ಲಿದೆ ಲಂಚದ ಸಾಕ್ಷಿ” ಎಂದು ಸದನದಲ್ಲಿ ಅಧಿಕಾರಿಗಳ ವಿರುದ್ಧ ಆರೋಪ ಹೊರಿಸಿದರು.
ಬಿಬಿಎಂಪಿಯ ರಮೇಶ್ ಎಂಬ ಅಧಿಕಾರಿಯು 30,000 ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದಾನೆ ಎಂದು ಆರೋಪಿಸಿ, ಫೋನ್ ಪೇ ಮೂಲಕ ಹಣ ವರ್ಗಾವಣೆಗೊಂಡಿರುವ ದಾಖಲೆಗಳನ್ನು ಬಿಡುಗಡೆ ಮಾಡಿದರು.
15,000 ರೂಪಾಯಿ ಲಂಚ ನೀಡಿದರೂ ಇ-ಖಾತಾ ಅರ್ಜಿ ತಿರಸ್ಕರಿಸಲಾಗಿದೆ ಎಂದು ಆರೋಪಿಸಿದರು. ಇದು ಸರ್ಕಾರದ ಲಂಚಾವತಾರದ ಸ್ಪಷ್ಟ ಉದಾಹರಣೆ ಎಂದು ಅಶೋಕ್ ಹೇಳಿದರು.
ಇನ್ನೂ, ಎಆರ್‌ಒ ನಂಜುಡಪ್ಪ ಎಂಬ ಅಧಿಕಾರಿ ಲೇಔಟ್ ಮಾಡುವವರಿಗೆ ಪ್ರತಿ ಸೈಟ್‌ಗೆ 30 ರಿಂದ 40 ಸಾವಿರ ರೂಪಾಯಿ ವಸೂಲಿ ಮಾಡುತ್ತಿರುವ ಬಗ್ಗೆ ಪೆನ್ ಡ್ರೈವ್ ಮೂಲಕ ದಾಖಲೆಗಳನ್ನು ಪ್ರದರ್ಶಿಸಿದರು.
ಪ್ರತಿಯೊಂದು ವಾರ್ಡ್‌ನಲ್ಲೂ ಇ-ಖಾತಾ ಪ್ರಕ್ರಿಯೆಗೆ ಲಂಚದ ಬೇಡಿಕೆ ಇಡಲಾಗುತ್ತಿದೆ. ಪಾಲಿಕೆ ಅಧಿಕಾರಿಗಳು ದಂಧೆ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ, ತೆರಿಗೆ ಕಟ್ಟದ ಪ್ರಭಾವಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿಲ್ಲ. ಬಡವರ ಮೇಲೆ ಮಾತ್ರ ಕಠಿಣ ಕ್ರಮ ಜಾರಿಯಾಗಿದೆ ಎಂದು ಟೀಕಿಸಿದರು. ಎರಡು ವರ್ಷಗಳಿಂದ ತೆರಿಗೆ ಕಟ್ಟದ ಮನೆ ಮಾಲೀಕರಿಗೆ ನೋಟಿಸ್ ನೀಡಿ ಮನೆ ಹರಾಜು ಮಾಡುವ ಎಚ್ಚರಿಕೆ ನೀಡಲಾಗುತ್ತಿದೆ ಎಂದು ಅಶೋಕ್ ವಿವರಿಸಿದರು.



