ಬೀದರ್: ಸಾಮಾನ್ಯ ಜನರು ವಿದ್ಯುತ್ ಬಿಲ್ ಪಾವತಿಯಲ್ಲಿ ಸ್ವಲ್ಪ ತಡವಾದರೂ ಕೂಡ ತಕ್ಷಣ ಸಂಪರ್ಕ ಕಡಿತಗೊಳಿಸುವ ವಿದ್ಯುತ್ ಇಲಾಖೆ, ಬೀದರ್ನ ಪ್ರತಿಷ್ಠಿತ ಬ್ರಿಮ್ಸ್ ಆಸ್ಪತ್ರೆ ವಿಚಾರದಲ್ಲಿ ಮಾತ್ರ ಮೃದು ಧೋರಣೆ ತಾಳುತ್ತಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
ಬೀದರ್ನ ಬ್ರಿಮ್ಸ್ ಆಸ್ಪತ್ರೆ ಕಳೆದ ಸುಮಾರು ಹತ್ತು ವರ್ಷಗಳಿಂದ ವಿದ್ಯುತ್ ಬಿಲ್ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಮೊತ್ತ ಕೇಳಿದರೆ ಅಚ್ಚರಿಯಾಗುತ್ತದೆ. ಒಟ್ಟು ಒಂದು ಕೋಟಿ ಎಪ್ಪತ್ತು ಲಕ್ಷ ಎಂಬತ್ತ ಸಾವಿರ ರೂಪಾಯಿ ವಿದ್ಯುತ್ ಬಿಲ್ ಬಾಕಿಯಾಗಿದೆ. ಈ ಮೊತ್ತ ಪಾವತಿಸುವಂತೆ ಜೆಸ್ಕಾಂ ವತಿಯಿಂದ ಹಲವು ಬಾರಿ ನೋಟಿಸ್ ನೀಡಿದರೂ ಕೂಡ ಆಸ್ಪತ್ರೆ ಆಡಳಿತ ಮಂಡಳಿ ಇದುವರೆಗೆ ಹಣ ಪಾವತಿಸಿಲ್ಲ.
ಜನಸಾಮಾನ್ಯರು ಒಂದು ತಿಂಗಳು ವಿದ್ಯುತ್ ಬಿಲ್ ಕಟ್ಟದೇ ಹೋದರೆ ತಕ್ಷಣ ಅವರ ಮನೆಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತದೆ. ಆದರೆ ಸರ್ಕಾರಿ ಆಸ್ಪತ್ರೆ ಎಂಬ ಕಾರಣಕ್ಕೆ ಹತ್ತು ವರ್ಷಗಳಿಂದ ಕೋಟ್ಯಂತರ ರೂಪಾಯಿ ಬಾಕಿ ಇದ್ದರೂ ಯಾವುದೇ ಕಠಿಣ ಕ್ರಮ ಕೈಗೊಳ್ಳದಿರುವುದು ಜೆಸ್ಕಾಂ ಇಲಾಖೆಯ ತಾರತಮ್ಯ ನೀತಿಯನ್ನು ಬಯಲಿಗೆಳೆದಿದೆ. ಇದರಿಂದ ಗಡಿಭಾಗದ ಬೀದರ್ ಜಿಲ್ಲೆಯ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನಿವಾಸಿ ಅಂಬ್ರೇಶ ಕೆಂಚಾ ಸೇರಿದಂತೆ ಹಲವು ಸಾರ್ವಜನಿಕರು, ಬಾಕಿ ಉಳಿದಿರುವ ಹಣವನ್ನು ಕೂಡಲೇ ವಸೂಲಿ ಮಾಡಿ ಸರ್ಕಾರದ ಬೊಕ್ಕಸಕ್ಕೆ ಸೇರಿಸಬೇಕು ಎಂದು ಜೆಸ್ಕಾಂ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ. ಲೋಡ್ ಶೆಡ್ಡಿಂಗ್ನಿಂದ ಜನತೆ ಹಾಗೂ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿರುವ ಈ ಸಮಯದಲ್ಲಿ, ಬಾಕಿ ಮೊತ್ತ ವಸೂಲಾದರೆ ವಿದ್ಯುತ್ ಖರೀದಿ ಮತ್ತು ಸಮರ್ಪಕ ಪೂರೈಕೆಗೆ ಸಹಕಾರಿಯಾಗಲಿದೆ ಎಂಬುದು ಜನರ ಅಭಿಪ್ರಾಯವಾಗಿದೆ.
ಕೋಟ್ಯಂತರ ರೂಪಾಯಿ ವಿದ್ಯುತ್ ಬಿಲ್ ಬಾಕಿ ಉಳಿದಿರುವ ಕುರಿತು ಜೆಸ್ಕಾಂ ಸರಣಿ ನೋಟಿಸ್ ನೀಡಿದರೂ ಹಣ ಪಾವತಿಯಾಗದೇ ಇರುವುದು ಇಲಾಖೆಯನ್ನೇ ಹೈರಾಣಾಗಿಸಿದೆ. ಆದರೆ ಸರ್ಕಾರಿ ಆಸ್ಪತ್ರೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಕನಿಷ್ಠ ಅರ್ಧ ಮೊತ್ತವನ್ನಾದರೂ ತಕ್ಷಣ ಪಾವತಿಸಿದರೆ ವಿದ್ಯುತ್ ವ್ಯವಸ್ಥೆ ಸುಧಾರಣೆಗೆ ಸಹಾಯವಾಗಲಿದೆ ಎಂದು ತಿಳಿದುಬಂದಿದೆ. ಆದರೆ ಈ ಕುರಿತು ಜೆಸ್ಕಾಂ ಅಧಿಕಾರಿಗಳು ಮಾಧ್ಯಮಗಳೊಂದಿಗೆ ಮಾತನಾಡಲು ಮುಂದಾಗಿಲ್ಲ. ಒಟ್ಟಿನಲ್ಲಿ ಬ್ರಿಮ್ಸ್ ಆಸ್ಪತ್ರೆಯಿಂದ ಬರಬೇಕಾದ ಕೋಟ್ಯಂತರ ರೂಪಾಯಿ ಹಣ ಜೆಸ್ಕಾಂಗೆ ಪಾವತಿಯಾದರೆ ಜನತೆಗೂ, ಇಲಾಖೆಗೂ ಲಾಭವಾಗಲಿದೆ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.



