ಮಂಡ್ಯ: ಜಿಲ್ಲೆಯ ಅಭಿವೃದ್ಧಿಗೆ ಕೈಗಾರಿಕೆ ತರಿಸುವ ವಿಚಾರದಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಗೆ ಶಾಸಕ ಗಣಿಗ ರವಿಕುಮಾರ್ ಸವಾಲು ಹಾಕಿದ್ದಾರೆ. ಮಂಡ್ಯದಲ್ಲಿ ಕೈಗಾರಿಕೆ ಸ್ಥಾಪನೆಗೆ 100 ಎಕರೆ ಜಾಗ ಲಭ್ಯವಿದ್ದು, ನೀವು ಕೈಗಾರಿಕೆ ತೆಗೆದುಕೊಂಡು ಬನ್ನಿ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರ ಕೈಗಾರಿಕೆ ತರಲು ಸಹಕಾರ ನೀಡುತ್ತಿಲ್ಲ, ಮಂಡ್ಯದಲ್ಲಿ ಕೈಗಾರಿಕೆ ಸ್ಥಾಪನೆಗೆ ಜಾಗವೇ ಇಲ್ಲ ಎಂದು ಹೆಚ್ಡಿಕೆ ಹೇಳಿದ್ದ ಹಿನ್ನೆಲೆಯಲ್ಲಿ, ಶಾಸಕ ಗಣಿಗ ರವಿಕುಮಾರ್ ಜಿಲ್ಲಾಧಿಕಾರಿಗಳೊಂದಿಗೆ ತೆರಳಿ ಕೈಗಾರಿಕೆ ಸ್ಥಾಪನೆಗೆ ಸೂಕ್ತ ಜಾಗವನ್ನು ಗುರುತಿಸಿದ್ದಾರೆ. ಕೈಗಾರಿಕೆ ಸ್ಥಾಪನೆಗೆ ಅಗತ್ಯವಿರುವ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧವಿದ್ದೇವೆ. ಮಂಡ್ಯಕ್ಕೆ ಕೈಗಾರಿಕೆ ತರಬೇಕು ಎಂಬುದೇ ನಮ್ಮ ಗುರಿ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಬೆಳವಣಿಗೆಯೊಂದಿಗೆ ಮಂಡ್ಯದಲ್ಲಿ ಕೈಗಾರಿಕೆ ವಿಚಾರವಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ ನಡುವಿನ ರಾಜಕೀಯ ಕದನ ಮತ್ತೊಂದು ಹಂತಕ್ಕೆ ತಲುಪಿದೆ.



