ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಭಗವಂತ ಪ್ರತಿಯೊಬ್ಬರಿಗೂ ಒಂದು ಕಲೆಯನ್ನು ಕೊಟ್ಟಿರುತ್ತಾನೆ. ಅದನ್ನು ನೀವು ಗುರುತಿಸಿಕೊಳ್ಳಿ. ಅದನ್ನು ಪೋಷಿಸಿ, ನಿಮ್ಮ ಭವಿಷ್ಯಕ್ಕೆ ಬಳಸಿಕೊಳ್ಳಿ. ಯಾವುದೇ ಕಾರಣಕ್ಕೂ ನಿಮ್ಮಲ್ಲಿರುವ ಪ್ರತಿಭೆಯನ್ನು ಕಮರಿಸಬೇಡಿ ಎಂದು ಜಾನಪದ ಕಲಾವಿದ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಂಕ್ರಣ್ಣ ಸಂಕಣ್ಣವರ ಹೇಳಿದರು.
ಪಟ್ಟಣದ ಡಾ. ಅಭಿನವ ಅನ್ನದಾನೇಶ್ವರ ಪಿಯು ಕಾಲೇಜಿನ ಸಾಂಘಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಿಮ್ಮಲ್ಲಿನ ಕಲೆಗೆ ನೀವೇ ಜೀವ ತುಂಬಬೇಕು. ಅದಕ್ಕೆ ಅವಕಾಶ ಸಿಕ್ಕಾಗಲೆಲ್ಲ ಯಾವುದೇ ನಾಚಿಕೆ, ಹಿಂಜರಿಕೆ ಪಡದೆ ಅದನ್ನು ಪ್ರದರ್ಶಿಸಬೇಕು. ಮೊದಮೊದಲು ತಪ್ಪುವುದು ಸಹಜ. ಆದರೆ ನೀವು ಛಲ ಬಿಡದೆ ಅದನ್ನು ಮುಂದುವರೆಸಿಕೊಂಡು ಹೋದರೆ ಮುಂದೊಂದು ದಿನ ಅದು ನಿಮ್ಮ ಕೈ ಹಿಡಿಯುತ್ತದೆ. ನಿಮ್ಮಲ್ಲಿನ ಕಲೆಯನ್ನು ಪ್ರೋತ್ಸಾಹಿಸುವುದಕ್ಕೆಂದೇ ಶಾಲೆ-ಕಾಲೇಜುಗಳಲ್ಲಿ ಸಾಂಘಿಕ ಚಟುವಟಿಕೆಗಳನ್ನು ನಡೆಸಲಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಸಂಸ್ಥೆಯ ಆಡಳಿತಾಧಿಕಾರಿ ಎನ್.ಆರ್. ಗೌಡರ ಮಾತನಾಡಿ, ಕಾಲೇಜು ಜೀವನ ಬಹಳ ಮಹತ್ವದ್ದು. ನಿಮ್ಮ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವ ಈ ಸಮಯವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದರು.
ಶೈಕ್ಷಣಿಕ ಸಲಹೆಗಾರ ಬಿ.ಎಸ್. ಗೌಡರ ಮಾತನಾಡಿ, ಶಾಲೆ-ಕಾಲೇಜುಗಳಲ್ಲಿ ತಮ್ಮ ಪ್ರತಿಭೆ ತೋರಿದ ಅದೆಷ್ಟೋ ಜನರು ಮುಂದೆ ದೊಡ್ಡ ಕಲಾವಿದರಾಗಿ ಮಿಂಚಿದ ಅನೇಕ ಉದಾಹರಣೆಗಳಿವೆ. ನೀವೂ ಸಹ ನಿಮ್ಮಲ್ಲಿನ ಕಲಾವಿದನನ್ನು ಗುರುತಿಸಿಕೊಂಡು ಜೀವನದಲ್ಲಿ ಉನ್ನತಿ ಪಡೆಯಿರಿ ಎಂದರು.
ಕಾಲೇಜಿನ ಚೇರಮನ್ ಸಿ.ಎಸ್. ಚಕ್ಕಡಿಮಠ ಅಧ್ಯಕ್ಷತೆ ವಹಿಸಿದ್ದರು. ಸಭೆಯನ್ನುದ್ದೇಶಿಸಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ, ಎಸ್.ಎ. ಪದವಿ ಕಾಲೇಜು ಚೇರಮನ್ ಎಸ್.ಎ. ಪಾಟೀಲ, ಪ್ರಾಚಾರ್ಯ ಎಸ್.ಜಿ. ಕೇಶಣ್ಣವರ, ಪಿಯು ಕಾಲೇಜು ಪ್ರಾಚಾರ್ಯ ವೈ.ಸಿ. ಪಾಟೀಲ ಮಾತನಾಡಿದರು. ಸದಸ್ಯರಾದ ಎಂ.ಪಿ. ತಳಬಾಳ, ಬಸವರಾಜ ಹೊನವಾಡ, ಅಂದಾನಯ್ಯ ಮುಷ್ಟಿಗೇರಿ, ಪ್ರಾಚಾರ್ಯೆ ಅನಸೂಯಾ ಪಾಟೀಲ ವೇದಿಕೆಯ ಮೇಲಿದ್ದರು. ಉಪನ್ಯಾಸಕ ಬಿ.ಎಸ್. ಗಾಣಿಗೇರ ಸ್ವಾಗತಿಸಿದರು.