ವಿಜಯನಗರ: ಆಸ್ತಿ ಕಲಹದ ಹಿನ್ನೆಲೆ ತಮ್ಮನೇ ಸಂಬಂಧಿಯೊಂದಿಗೆ ಸೇರಿ ಅಣ್ಣನನ್ನು ಕೊಲೆ ಮಾಡಿದ ಘಟನೆ ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನಲ್ಲಿ ನಡೆದಿದೆ.
ಹಗರಿಶಿರಹಳ್ಳಿ ಗ್ರಾಮದ ಮರುಳಸಿದ್ದೇಶ್ (26) ಕೊಲೆಯಾದ ಯುವಕ.
ಈ ಪ್ರಕರಣದಲ್ಲಿ ಮರುಳಸಿದ್ದೇಶ್ನ ತಮ್ಮ ಪತ್ರಿಗೌಡ (24) ಹಾಗೂ ಸಂಬಂಧಿ ನಾರಪ್ಪ (29) ವಿರುದ್ಧ ಕೊಲೆ ಆರೋಪ ಕೇಳಿಬಂದಿದ್ದು, ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಪತ್ರಿಗೌಡ ಮದ್ಯ ವ್ಯಸನಿಯಾಗಿದ್ದು, ಆಸ್ತಿಯಲ್ಲಿ ಪಾಲು ಬೇಕೆಂದು ಕೆಲ ದಿನಗಳಿಂದ ತಾಯಿ ಜೊತೆ ಜಗಳ ಮಾಡುತ್ತಿದ್ದ ಎನ್ನಲಾಗಿದೆ. ಅಲ್ಲದೆ, ಬೆಂಗಳೂರಿಗೆ ಕೆಲಸಕ್ಕೆ ಹೋಗುವ ವಿಷಯದಲ್ಲೂ ಮನೆಯಲ್ಲಿ ಗಲಾಟೆ ನಡೆದಿತ್ತು ಎಂದು ತಿಳಿದುಬಂದಿದೆ.
ಆಸ್ತಿ ಸಂಪೂರ್ಣ ತನ್ನದಾಗಬೇಕು ಎಂಬ ಉದ್ದೇಶದಿಂದ ಪತ್ರಿಗೌಡ, ಸಂಬಂಧಿ ನಾರಪ್ಪನ ಜೊತೆ ಸೇರಿ ಅಣ್ಣ ಮರುಳಸಿದ್ದೇಶ್ನ ಹತ್ಯೆ ನಡೆಸಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.



