ದಾವಣಗೆರೆ: ಜಿಲ್ಲೆಯಲ್ಲಿ ನಡೆದ ದಾರುಣ ಘಟನೆಯಲ್ಲಿ, ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಸಹೋದರರು ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ.
ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಹಲವಾಗಲು ಗ್ರಾಮದಲ್ಲಿ ನಡೆದ ಈ ಘಟನೆ ಎಲ್ಲರ ಮನಸ್ಸನ್ನೂ ಕಲಕಿದೆ. ಮನು (19) ಮತ್ತು ಪ್ರಜ್ವಲ್ (18) ಮೃತರಾಗಿದ್ದು, ತಮ್ಮ ತಂದೆಯ ಕಣ್ಣೆದುರಲ್ಲೇ ಈ ದುರ್ಘಟನೆ ನಡೆದಿದೆ.
ತಂದೆ ಮಂಜಪ್ಪ ಅವರೊಂದಿಗೆ ಮೂವರು ಮಕ್ಕಳು ನದಿಗೆ ತೆರಳಿದ್ದಾಗ, ನೀರಿನ ಪ್ರವಾಹದಲ್ಲಿ ಇಬ್ಬರು ಸಹೋದರರು ನಿಯಂತ್ರಣ ಕಳೆದುಕೊಂಡು ಕೊಚ್ಚಿಕೊಂಡು ಹೋಗಿದ್ದಾರೆ.
ಆಪತ್ತಿನ ಕ್ಷಣದಲ್ಲಿ ಮಂಜಪ್ಪ ಅವರ ಸಮಯಪ್ರಜ್ಞೆಯಿಂದ ಮೂರನೇ ಮಗ ಚಿರಂಜೀವಿ ಜೀವಾಪಾಯದಿಂದ ಪಾರಾಗಿದ್ದಾನೆ. ಇಬ್ಬರು ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದು, ಇಡೀ ಗ್ರಾಮಸ್ಥರು ಆಘಾತಕ್ಕೊಳಗಾಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಹಲವಾಗಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



