ಕಲಬುರಗಿ: ಅಫಜಲಪುರ ತಾಲೂಕಿನ ಬಡದಾಳ ಗ್ರಾಮದಲ್ಲಿ ಸಹೋದರರ ಸಾವಿನ ಘಟನೆ ಜನರಲ್ಲಿ ತೀವ್ರ ನೋವು ಮೂಡಿಸಿದೆ. ಗ್ರಾಮದ ಹಿರಿಯ ನಿವಾಸಿ ಬಸವಂತರಾಯ ಸಣ್ಣಕ್ (81) ಅವರು ಅನಾರೋಗ್ಯದಿಂದ ಜನವರಿ 26ರಂದು ನಿಧನರಾಗಿದ್ದರು. ಅವರ ಅಂತ್ಯಕ್ರಿಯೆ ಜನವರಿ 27ರಂದು ನೆರವೇರಿತ್ತು.
ಅಣ್ಣನ ಅಗಲಿಕೆಯ ಆಘಾತಕ್ಕೆ ಒಳಗಾಗಿದ್ದ ಅವರ ತಮ್ಮ ಶಿವರಾಯ ಸಣ್ಣಕ್ (79) ಅವರು ಮಾನಸಿಕವಾಗಿ ಕುಸಿದು, ಮನೆಗೆ ಮರಳಿದ ಬಳಿಕ ಆರೋಗ್ಯ ಹದಗೆಟ್ಟು ಅದೇ ದಿನ ರಾತ್ರಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಅಣ್ಣ-ತಮ್ಮಂದಿರಿಬ್ಬರೂ ಸತತ ಎರಡು ದಿನಗಳಲ್ಲಿ ಅಗಲಿರುವುದರಿಂದ ಗ್ರಾಮದಲ್ಲಿ ಶೋಕಾಚರಣೆ ಮುಂದುವರಿದಿದೆ.
ಇನ್ನೊಂದೆಡೆ, ದಾವಣಗೆರೆ ತಾಲೂಕಿನ ತುರ್ಚಗಟ್ಟ ಗ್ರಾಮದಲ್ಲಿ 35 ವರ್ಷದ ಯುವಕ ರಮೇಶ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಜಮೀನಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಲಾಯಿತಾದರೂ, ಮಾರ್ಗಮಧ್ಯೆಲೇ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.



