ಕಂಟಕ ನಿವಾರಣೆಗೆ ಪೂಜೆ ಮಾಡಿಸಲು ಹಣ ಪಡೆದು ನಾಪತ್ತೆಯಾದ ಬುಡಬುಡುಕೆ ಬಾಬಾ……

0
Spread the love

ಫೋನ್‌ಪೇ ಮೂಲಕ ಹಣ ಪಡೆದು ಮೋಸ: ಪ್ರಕರಣ ದಾಖಲು

Advertisement

ವಿಜಯಸಾಕ್ಷಿ ಸುದ್ದಿ, ರೋಣ

ನಿಮ್ಮ ಸಹೋದರನಿಗೆ ನಾನಾ ರೀತಿಯ ಸಮಸ್ಯೆಗಳು, ಜೀವ ಕಂಟಕವಿದೆ, ಅದನ್ನು ಪೂಜೆಯ ಮೂಲಕ ಪರಿಹರಿಸುತ್ತೇನೆಂದು ಹೇಳಿ ನಂಬಿಸಿ, ಫೋನ್‌ಪೇ ಮೂಲಕ 53 ಸಾವಿರ ರೂ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡು ವ್ಯಕ್ತಿಯೊಬ್ಬರು ಮೋಸ ಮಾಡಿರುವ ಕುರಿತು ರೋಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿದೆ.

ರೋಣ ತಾಲೂಕಿನ ಅಸೂಟಿ ಗ್ರಾಮದ ನಿವಾಸಿ ಅಭಿಷೇಕ ವಿರೂಪಾಕ್ಷಪ್ಪ ದಿಂಡೂರು ದೂರುದಾರರಾಗಿದ್ದಾರೆ.

ಮೇ.9ರ ಮುಂಜಾನೆ 7.15 ಗಂಟೆಯ ಸುಮಾರಿಗೆ ಅಸೂಟಿ ಗ್ರಾಮದ ತಮ್ಮ ಮನೆಯಲ್ಲಿರುವಾಗ ಅಪರಿಚಿತ ವ್ಯಕ್ತಿಯೊಬ್ಬರು ತಾನು ಬುಡಬುಡುಕೆಯವನೆಂದು ಹೇಳಿಕೊಂಡು ಮನೆಗೆ ಬಂದಿದ್ದರು.

ಈ ಸಮಯದಲ್ಲಿ ದೂರುದಾರರಿಗೆ ಮೋಸ ಮಾಡುವ ಉದ್ದೇಶದಿಂದ ನಿಮ್ಮ ಅಣ್ಣನಿಗೆ ಹಲವಾರು ಸಮಸ್ಯೆಗಳಿವೆ, ಪ್ರಾಣ ಕಂಟಕವಿದೆ, ಪೂಜೆ ಮಾಡಿಸಬೇಕೆಂದು ನಂಬಿಸಿದ್ದರು.

ನಂತರ ಪೂಜಾ ಸಾಮಗ್ರಿಗಳನ್ನು ತರಲು ಹಣ ನೀಡಿ ಎಂದು ಅದೇ ಸಮಯದಲ್ಲಿ ತನ್ನ ಮೊಬೈಲ್‌ಗೆ 16 ಸಾವಿರ ರೂ ಹಣ ಹಾಕಿಸಿಕೊಂಡು ಹೋಗಿದ್ದರು.
ಮಾರನೇ ದಿನ ಬೆಳಿಗ್ಗೆ 9.45ರ ಸಮಯಕ್ಕೆ ಆರೋಪಿಯು ಫಿರ್ಯಾದಿಗೆ ಮತ್ತೆ ಫೋನ್‌ ಮಾಡಿ, ಪೂಜಾ ಸಾಮಗ್ರಿಗಳ ಒಟ್ಟೂ ಮೊತ್ತ 53 ಸಾವಿರ ರೂ ಆಗಿದೆ ಎಂದು ತಿಳಿಸಿ, ಪುನಃ 25 ಸಾವಿರ ರೂ ಹಣ ಹಾಕಿಸಿಕೊಂಡಿದ್ದರು.

ಅಲ್ಲದೆ, ಫಿರ್ಯಾದಿಯ ಅಣ್ಣ ಬಸವರಾಜ ದಿಂಡೂರ ಇವರ ಮೊಬೈಲ್‌ನಿಂದಲೂ 12 ಸಾವಿರ ರೂ. ಹಣವನ್ನು ಫೋನ್‌ಪೇ ಮೂಲಕ ವರ್ಗಾಯಿಸಿಕೊಂಡಿದ್ದರು.
ಇದಾದ ನಂತರ ಫಿರ್ಯಾದಿಯ ಮನೆಗೆ ಬಾರದೇ, ಯಾವುದೇ ಪೂಜೆಯನ್ನೂ ಮಾಡದೇ ಒಟ್ಟೂ 53 ಸಾವಿರ ರೂ ಹಣ ಪಡೆದು ಮೋಸ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ.

ಈ ಸಂಬಂಧ ಅಪರಾಧ 0078/2023, ಐಪಿಸಿ 1860ರ ಕಲಂ 420 ಅಡಿಯಲ್ಲಿ ರೋಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


Spread the love

LEAVE A REPLY

Please enter your comment!
Please enter your name here