ಬುದ್ಧ ಎಂದರೆ ಅರಿವು, ಜ್ಞಾನ, ಬೆಳಕು

0
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಬುದ್ಧ ಎಂದರೆ ಅದೊಂದು ಅರಿವು, ಜ್ಞಾನ, ಬೆಳಕು. ತನ್ನಲ್ಲಿ ಯಾರು ಈ ಮೂರನ್ನು ಹೊಂದಿರುತ್ತಾನೆಯೋ ಅವನೇ ಬುದ್ಧನಾಗುತ್ತಾನೆ. ಸಿದ್ಧಾರ್ಥ ಬುದ್ಧನಾದುದು ಹೀಗೆಯೇ ಎಂದು ಪ್ರಾಧ್ಯಾಪಕ ಡಾ. ರಮೇಶ ಕಲ್ಲನಗೌಡ್ರ ಹೇಳಿದರು.

Advertisement

ಪಟ್ಟಣದ ಶ್ರೀ ಅನ್ನದಾನೇಶ್ವರ ಮಂಟಪದಲ್ಲಿ ನಡೆದ ಶಿವಾನುಭವಗೋಷ್ಠಿ-62ರಲ್ಲಿ ಬುದ್ಧನ ಜೀವನ ಚರಿತ್ರೆ ಕುರಿತು ಅವರು ಮಾತನಾಡಿದರು.

ಆಸೆಯೇ ದುಃಖಕ್ಕೆ ಮೂಲ ಕಾರಣ ಎಂಬುದು ಬುದ್ಧನ ಮೂಲ ಮಂತ್ರವಾಗಿದೆ. ಆಸೆಯ ಆಳವನ್ನು ಅರಿತಾಗ ನಮಗೆ ದುಃಖವೆಂದರೇನೆಂಬುದು ಅರ್ಥವಾಗುತ್ತದೆ. ಸಿದ್ಧಾರ್ಥನಿಗೆ ಈ ಅರಿವು ಆಗಿದ್ದರಿಂದಲೆ ಆತ ಎಲ್ಲವನ್ನೂ ತೊರೆದು ಮಧ್ಯರಾತ್ರಿ ಮನೆ ಬಿಟ್ಟು ಹೋಗಿ ಬುದ್ಧನಾದ. ಬುದ್ಧತ್ವದ ಭಾವವನ್ನು ನಮ್ಮಲ್ಲಿ ಅಳವಡಿಸಿಕೊಂಡಾಗ ಮಾತ್ರ ನಮಗೆ ಜೀವನದ ನಿಜವೇನೆಂಬುದು ಅರ್ಥವಾಗುತ್ತದೆ. ಆದರೆ ಇದು ಎಲ್ಲರಿಗೂ ಸಾಧ್ಯವಾಗುವದಲ್ಲ ಎಂದರು.

ನಾವು ಪ್ರತಿ ದಿನ, ಪ್ರತಿ ಕ್ಷಣ ಸುಖವನ್ನು ಬಯಸುತ್ತೇವೆ ಹೊರತು ದುಃಖವನ್ನಲ್ಲ. ಒಬ್ಬೊಬ್ಬರ ಸುಖದ ಕಲ್ಪನೆ ಒಂದೊಂದು ರೀತಿಯದ್ದಾಗಿರುತ್ತದೆ. ಇದಕ್ಕೆ ಕಾರಣ ನಮ್ಮ ಮನಸ್ಸು ಮತ್ತು ಬುದ್ಧಿ. ಹೃದಯ ಮತ್ತು ಮೆದುಳು ದೇಹದ ಎರಡು ಮಹತ್ವದ ಅಂಗಗಳು. ಈ ಅಂಗಗಳ ಸಮರ್ಪಕ ಕಾರ್ಯ ನಿರ್ವಹಣೆಯಿಂದ ನಮ್ಮ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ಇವೆರಡರ ಆಲಿಂಗನವೇ ಸಾಹಿತ್ಯವಾಗಿದೆ. ಮನುಷ್ಯ ತನ್ನನ್ನು ತಾನು ಪರೀಕ್ಷೆಗೆ ಒಡ್ಡಿಕೊಂಡಾಗ ಆತನಿಗೆ ತನ್ನ ಶಕ್ತಿ ಏನೆಂಬುದು ತಿಳಿಯುತ್ತದೆ. ನಮ್ಮ ಪರಿಮಿತಿಯೊಳಗೆ ನಾವು ಬದುಕಬೇಕು. ಅಂದಾಗ ಮಾತ್ರ ನಮ್ಮ ಜೀವನ ಸುಖಮಯವಾಗಿರುತ್ತದೆ ಎಂದು ಹೇಳಿದರು.

ನಿವೃತ್ತ ಪ್ರಾಚಾರ್ಯ ಸಿ.ಐ. ಮರಡಿಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಿವೃತ್ತ ಮುಖ್ಯ ಶಿಕ್ಷಕ ಅರುಣ ಕುಲಕರ್ಣಿ ವೇದಿಕೆಯ ಮೇಲಿದ್ದರು. ಆಡಳಿತಾಧಿಕಾರಿ ಎನ್.ಆರ್. ಗೌಡರ, ಡಾ. ಎಸ್.ಎ. ಪಾಟೀಲ, ಡಾ. ಎಲ್.ಎಸ್. ಗೌರಿ, ರಾಚಯ್ಯ ಮಠದ, ಮುಖ್ಯ ಶಿಕ್ಷಕ ಸಂಗಮೇಶ ಹೂಲಗೇರಿ ಉಪಸ್ಥಿತರಿದ್ದರು. ಉಪನ್ಯಾಸಕ ಎಫ್.ಎನ್. ಹುಡೇದ ಸ್ವಾಗತಿಸಿದರು. ಡಾ. ಕಲ್ಲಯ್ಯ ಹಿರೇಮಠ ನಿರೂಪಿಸಿದರು. ಹಾದಿಮನಿ ವಂದಿಸಿದರು.


Spread the love

LEAVE A REPLY

Please enter your comment!
Please enter your name here