ಗದಗ: ಮಳೆ, ಬಿಸಿಲು, ಛಳಿ ಮತ್ತು ಧೂಳು ಎನ್ನದೆ ಶ್ರಮಪಟ್ಟು ಜೀವನ ಸಾಗಿಸುತ್ತಿರುವ ಬೀದಿ ಬದಿ ವ್ಯಾಪಾರಿಗಳು ಕೋವಿಡ್ ಸಂಕಷ್ಟದ ಸಮಯದಲ್ಲೂ ಜನರಿಗೆ ಆಹಾರ ತಲುಪಿಸುವಲ್ಲಿ ಮಹತ್ವದ ತ್ಯಾಗ ಮಾಡಿದ್ದರು. ಇಂತಹ ವ್ಯಾಪಾರಿಗಳ ಅಭಿವೃದ್ಧಿಗೆ ಸಹಾಯಕವಾಗುವ ಬಜೆಟ್ ಅನ್ನು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವುದು ಸ್ವಾಗತಾರ್ಹವಾಗಿದೆ ಎಂದು ರಾಷ್ಟ್ರೀಯ ಬೀದಿ ಬದಿ ವ್ಯಾಪಾರಿಗಳ ಸಂಘದ ನಿರ್ದೇಶಕ ಹಾಗೂ ನೆಟ್ವರ್ಕ್ ಅಸೋಸಿಯೇಟೆಡ್ ಸ್ಟ್ರೀಟ್ ವೆಂಡರ್ಸ್ ಆಫ್ ಕರ್ನಾಟಕದ ಸಂಚಾಲಕ ಅನ್ವರ ಶಿರಹಟ್ಟಿ ತಿಳಿಸಿದ್ದಾರೆ.
ಬೀದಿ ಬದಿ ವ್ಯಾಪಾರಿಗಳ ಆರ್ಥಿಕ ಹಾಗೂ ಸಾಮಾಜಿಕ ಸಬಲೀಕರಣಕ್ಕಾಗಿ ಸಮೀಕ್ಷೆ ನಡೆಸುವುದು, ಗುರುತಿನ ಚೀಟಿ ವಿತರಣೆ, ಮಾರಾಟ ಪರವಾನಗಿ (ಮಾರಾಟ ಪತ್ರ) ನೀಡುವುದು ಹಾಗೂ ಪಟ್ಟಣ ಮಾರಾಟ ಸಮಿತಿಗಳ ರಚನೆಗಾಗಿ ರಾಜ್ಯ ಬಜೆಟ್ನಲ್ಲಿ ಏಳು ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿರುವುದು ಸಂತೋಷದ ವಿಚಾರವಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಕ್ರಮವು ರಾಜ್ಯದ ಬೀದಿ ಬದಿ ವ್ಯಾಪಾರಿಗಳ ಸರ್ವಾಂಗೀಣ ಅಭಿವೃದ್ಧಿಗೆ ದಾರಿಯಾಗಲಿದೆ ಎಂದು ಹೇಳಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಸರ್ಕಾರಕ್ಕೆ ಅನ್ವರ ಶಿರಹಟ್ಟಿ ಅವರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.



