ವಿಜಯಸಾಕ್ಷಿ ಸುದ್ದಿ, ಗದಗ: ಕೇಂದ್ರ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ರಾಷ್ಟ್ರದ ಆರ್ಥಿಕ ಪ್ರಗತಿಗೆ ಇಂಬು ಕೊಡಬಲ್ಲ ಮುಂಗಡ ಪತ್ರವಾಗಿರದೇ ರಾಷ್ಟ್ರದ ಅರ್ಥ ವ್ಯವಸ್ಥೆಯ ನೈಜ ಚಿತ್ರಣವನ್ನು ಮರೆಮಾಚಿದೆ. ರಾಜ್ಯಗಳಿಗೆ ಹಣಕಾಸು ಹಂಚಿಕೆ ರಚನಾತ್ಮಕವಾಗಿಲ್ಲ ಎಂದು ರಾಜ್ಯದ ಕಾನೂನು ಹಾಗೂ ಸಂಸದೀಯ ವ್ಯವಹಾರಗಳು, ಪ್ರವಾಸೋದ್ಯಮ ಇಲಾಖೆ ಸಚಿವರೂ ಆಗಿರುವ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರದ 2026-27ನೇ ಸಾಲಿನ ಬಜೆಟ್ ಕುರಿತು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ಆದಾಯ ಕರ ಮಿತಿಗಳನ್ನು ತರ್ಕಬದ್ಧಗೊಳಿಸುವಿಕೆಯನ್ನು ಬಿಟ್ಟು ಹೊಸ ಹಣಕಾಸು ಕಾಯ್ದೆಯನ್ನು ಜಾರಿಗೊಳಿಸುತ್ತಿರುವುದು ರಾಷ್ಟ್ರದ ಅರ್ಥ ವ್ಯವಸ್ಥೆಗೆ ತೀರಾ ಹಿನ್ನಡೆಯಾಗುತ್ತದೆ. ಆದಾಯ ತೆರಿಗೆಯ ರಿಟರ್ನ್‌ನ್ನು ದಾಖಲಿಸುವಲ್ಲಿ ಮಾಡುವ ವಿಳಂಬವನ್ನು ಮನ್ನಾ ಮಾಡುವುದು ಮತ್ತು ಪರಿಷ್ಕರಿಸಲು ಅವಕಾಶ ನೀಡಿರುವುದು ಕಪ್ಪು ಹಣದ ಉತ್ಪತ್ತಿ ಹೆಚ್ಚಾಗಲು ಕಾರಣವಾಗುತ್ತದೆ.
ಕೇಂದ್ರ ಮುಂಗಡ ಪತ್ರದಲ್ಲಿ ಕರ್ನಾಟಕದ ಹೆಸರು ಪ್ರಸ್ತಾಪವಾಗಿದ್ದರೂ ಸಹ ನೈಜ ಹಣಕಾಸಿನ ಸ್ಪಷ್ಟವಾದ ಉಲ್ಲೇಖವಿಲ್ಲದೇ ಯೋಜನೆಗಳು ಕೇವಲ ಕಾಗದದ ಹುಲಿಗಳಾಗಿವೆ. ಆದ್ದರಿಂದ ಅಸ್ಪಷ್ಟ ಆರ್ಥಿಕ ಚಿತ್ರಣವನ್ನು ಒಳಗೊಂಡಿರುವ ಕೇಂದ್ರ ಮುಂಗಡ ಪತ್ರ ರಾಷ್ಟ್ರದ ಜನತೆಗೆ ನಿರಾಶಾದಾಯಕವಾಗಿದೆ ಹೇಳಿದ್ದಾರೆ.



