ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸಾಮೂಹಿಕ ವಿವಾಹ ಎಂದರೆ ಅದು ಕೇವಲ ಬಡ ಜನರ ಮದುವೆ ಕಾರ್ಯಕ್ರಮ ಎಂದು ಭಾವಿಸುವುದು ತಪ್ಪು. ಪವಿತ್ರವಾದ ಧಾರ್ಮಿಕ ಕ್ಷೇತ್ರ, ಕಾರ್ಯಕ್ರಮಗಳಲ್ಲಿ ಸಹಸ್ರಾರು ಭಕ್ತರ ಮತ್ತು ಮಠಾಧೀಶರ ಆಶೀರ್ವಾದದೊಂದಿಗೆ ಸಾಮೂಹಿಕ ವಿವಾಹ ಬಂಧನಕ್ಕೊಳಗಾಗುವ ಭಾಗ್ಯ ಜೀವನದ ಸಾರ್ಥಕತೆಯ ಕ್ಷಣವಾಗಿದೆ ಎಂದು ಮೈಸೂರು/ಬನ್ನಿಕೊಪ್ಪ ಜಪದಕಟ್ಟಿಮಠದ ಡಾ. ಸುಜ್ಞಾನದೇವ ಶಿವಾಚಾರ್ಯರು ಹೇಳಿದರು.
ಅವರು ಬುಧವಾರ ತಾಲೂಕಿನ ಸುಕ್ಷೇತ್ರ ಸಂಕದಾಳ ಶ್ರೀ ಸದ್ಗುರು ಶಿವಯೋಗಿ ಹಾಲಶಿವಯೋಗಿಗಳ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಸಾಮೂಹಿಕ ವಿವಾಹ ಮಹೋತ್ಸವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ವಿವಾಹ ಬಂಧನವೆಂದರೆ ಎರಡು ಮನಸ್ಸು, ಜೀವಗಳು ಒಂದಾಗಿ ಪರಸ್ಪರರು ಹಾಲು-ಜೇನಿನಂತೆ ಅನ್ನಯೋನ್ಯತೆಯಿಂದ ಜೀವನ ಸಾಗಿಸುವ ಪವಿತ್ರ ಬಂಧವಾಗಿದೆ. ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ದಂಪತಿಗಳು ಪರಸ್ಪರ ಪ್ರೀತಿ, ವಿಶ್ವಾಸದಿಂದ ತಂದೆ-ತಾಯಿ, ಅತ್ತೆ-ಮಾವ, ಗುರು-ಹಿರಿಯರಲ್ಲಿ ವಿಧೇಯತೆ, ತಾಳ್ಮೆಯಿಂದ ಆದರ್ಶಮಯ ಜೀವನಕ್ಕೆ ಅಣಿಯಾಗಬೇಕು. ದುಶ್ಚಟಗಳಿಂದ ದೂರವಿದ್ದು ಕಾಯಕದೊಂದಿಗೆ ಉತ್ತಮ ಜೀವನ ರೂಪಿಸಿಕೊಳ್ಳಿ ಎಂದು ನವದಂಪತಿಗಳಿಗೆ ಸಲಹೆ ನೀಡಿದರು.
ಗಂಜಿಗಟ್ಟಿ ಚರಮೂರ್ತೇಶ್ವರ ಮಠದ ಡಾ. ಶಿವಲಿಂಗೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿ, ಸಾಮೂಹಿಕ ವಿವಾಹಗಳು ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಜಾತ್ಯಾತೀತ ಮನೋಭಾವ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ. ಈ ನಿಟ್ಟಿನಲ್ಲಿ ಯುವ ಸಂಘಟನೆಗಳು, ದೇವಸ್ಥಾನ ಸಮಿತಿಗಳು ಸಂದರ್ಭೋಚಿತವಗಿ ಇಂತಹ ಕಲ್ಯಾಣ ಕಾರ್ಯಗಳನ್ನು ಹಮ್ಮಿಕೊಳ್ಳುವುದರಿಂದ ಬಡ ಕುಟುಂಬಗಳಿಗೆ ಆಸರೆಯಾಗುತ್ತದೆ. ಸಂಸಾರದ ಗುಟ್ಟು ಬಿಟ್ಟು ಕೊಡದೇ ಪ್ರೀತಿ ತುಂಬಿದ ಸಂಸಾರದ ಜೋಡೆತ್ತಿನ ಬಂಡಿ ಸಾರಾಗವಾಗಿ ಸಾಗಿದಾಗ ಮಾತ್ರ ಆ ಮನೆ ಸ್ವರ್ಗವಾಗುತ್ತದೆ. ಸಂಪ್ರದಾಯ, ಸಂಸ್ಕೃತಿ, ಧರ್ಮ ಮಾರ್ಗ ಮತ್ತು ಮಠ-ಮಾನ್ಯಗಳ ಸತ್ಸಂಗದೊAದಿಗೆ ಸಾತ್ವಿಕ ಜೀವನಕ್ಕೆ ಒಗ್ಗಿಕೊಳ್ಳಬೇಕು ಎಂದರು.
ಲಕ್ಷ್ಮೇಶ್ವರ ಕರೇವಾಡಿಮಠದ ಶ್ರೀ ಮಳೇಮಲ್ಲಿಕಾರ್ಜುನ ಶಿವಾಚಾರ್ಯರು, ಕಳಸಾಪುರದ ಶ್ರೀ ಫಕ್ಕಿರೇಶ್ವರ ಶಿವಾಚಾರ್ಯರು, ವರವಿಯ ಶ್ರೀ ಮೌನೇಶ್ವರ ಸ್ವಾಮಿಗಳು, ಹುಲ್ಲೂರಿನ ಶ್ರೀ ಸಿದ್ದಯ್ಯಜ್ಜ ಸ್ವಾಮಿಗಳು, ಶ್ರೀಮಠದ ಶ್ರೀ ವಾಗೀಶ ಪಂಡಿತಾರಾದ್ಯ ಹಾಲ ಶಿವಯೋಗಿಗಳು ಸೇರಿ ಹಾಲಸ್ವಾಮಿ ಶಾಖಾ ಮಠದ ಎಲ್ಲ ಪೂಜ್ಯರ ಉಪಸ್ಥಿತಿಯಲ್ಲಿ ಒಟ್ಟು 8 ಜೋಡಿಗಳು ವಿವಾಹ ಬಂಧನಕ್ಕೊಳಗಾದರು. ಶಾಸಕ ಡಾ. ಚಂದ್ರು ಲಮಾಣಿ, ಗ್ರಾಮದ ಗುರು-ಹಿರಿಯರು ಇದ್ದರು. ಸಂಜೆ ಕಡುಬಿನ ಕಾಳಗ, ಪಲ್ಲಕ್ಕಿ ಉತ್ಸವ, ಬಾಲ ಪ್ರತಿಭೆ ಮಹಾನ್ಯ ಪಾಟೀಲ ತಂಡದಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಜರುಗಿತು.
ಜಾತ್ರಾ ಮಹೋತ್ಸವದ ಅಂಗವಾಗಿ ಎ. 14ರಂದು ರಾತ್ರಿ ಪಾರಂಪರಿಕ ಮುಳ್ಳುಗದ್ದುಗೆ ಮಹೋತ್ಸವ ಅಪಾರ ಭಕ್ತ ಸಮೂಹದ ಸಮ್ಮುಖದಲ್ಲಿ ಜರುಗಿತು. ಎ.15ರಂದು ಕಲಕೇರಿಯ ಶ್ರೀ ಮುದುಕೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಶಿವದೀಕ್ಷಾ ಅಯ್ಯಾಚಾರ, ಸಂಜೆ ಮಹಾ ರಥೋತ್ಸವ, ಬಳಿಕ ಅಮೋಘ ಭರತ್ ತಂಡದಿಂದ ಮಲ್ಲಗಂಬ ಪ್ರದರ್ಶನ, ರಾತ್ರಿ ಶಿವಕೀರ್ತನೆ, ಸಾಹಿತ್ಯ ಸಂಸ್ಕೃತಿ ಕಾರ್ಯಕ್ರಮಗಳು ಜರುಗಿದವು.