ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪಟ್ಟಣದಲ್ಲಿನ ರೈತ ಸಂಪರ್ಕ ಕೇಂದ್ರದಿಂದ ಕಾಲೇಜಿನವರೆಗೆ ಸಿಸಿ ಜೋಡು ರಸ್ತೆಯನ್ನು ನಿರ್ಮಾಣ ಮಾಡುತ್ತಿರುವುದು ಸ್ತುತ್ಯವಾದ ಕಾರ್ಯ. ಈಗಾಗಲೇ ಒಂದು ಭಾಗದ ರಸ್ತೆ ನಿರ್ಮಾಣವಾಗಿದ್ದು, ಇನ್ನೊಂದು ಬದಿಯ ರಸ್ತೆಯ ನಿರ್ಮಾಣ ಪ್ರಗತಿಯಲ್ಲಿದೆ. ರಸ್ತೆಯನ್ನು ನಿರ್ಮಿಸಿರುವ ಉದ್ದೇಶವು ಸಫಲವಾಗಬೇಕಾದರೆ ಜೋಡು ರಸ್ತೆಯ ಎರಡೂ ಬದಿಗೆ ಪಾದಚಾರಿ ಮಾರ್ಗವನ್ನು ನಿರ್ಮಿಸಬೇಕೆಂದು ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ನಿಕಟಪೂರ್ವ ಅಧ್ಯಕ್ಷ ಡಾ. ಕೆ.ಬಿ. ಧನ್ನೂರ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈ ಜೋಡು ರಸ್ತೆಗೆ ಪಾದಚಾರಿ ಮಾರ್ಗ ಅತ್ಯಂತ ಅವಶ್ಯಕ. ಈ ರಸ್ತೆಯಲ್ಲಿ ಶಾಲೆ-ಕಾಲೇಜುಗಳು ಇವೆ. ವಿದ್ಯಾರ್ಥಿಗಳು ಸುರಕ್ಷಿತವಾಗಿ ತಮ್ಮ ಮನೆಗಳಿಗೆ ಸೇರಲು ಪಾದಚಾರಿ ಮಾರ್ಗವು ಅತ್ಯಂತ ಅವಶ್ಯವಾಗಿದೆ. ಆದ್ದರಿಂದ ಪಾದಚಾರಿ ಮಾರ್ಗ ನಿರ್ಮಿಸಿ, ಅವುಗಳಿಗೆ ರಸ್ತೆಯ ಗುಂಟ ಕಟಾಂಜನವನ್ನೂ ನಿರ್ಮಿಸಿದರೆ ವಿದ್ಯಾರ್ಥಿಗಳು ಸುರಕ್ಷಿತವಾಗಿರುತ್ತಾರೆ ಎಂದಿದ್ದಾರೆ.
ಇಗ ನಿರ್ಮಾಣವಾಗುತ್ತಿರುವ ರಸ್ತೆಯ ಅಳತೆಯನ್ನು ಬೇಕಾಬಿಟ್ಟಿಯಾಗಿ, ಅನುಕೂಲ ಸಿಂಧುವಾಗುವಂತೆ ತೆಗೆದುಕೊಳ್ಳುತ್ತಿರುವ ದೂರುಗಳು ಬಂದಿವೆ. ಅದಕ್ಕೆ ಅವಕಾಶ ಕೊಡದೆ ಗುತ್ತಿಗೆದಾರರು ಎರಡೂ ಕಡೆಗಳಲ್ಲಿ ಸಮ ಪ್ರಮಾಣ ಅಗಲದ ರಸ್ತೆಗಳನ್ನು ನಿರ್ಮಿಸಬೇಕು ಮತ್ತು ಸಮರ್ಪಕವಾದ ಅಳತೆಯನ್ನು ತೆಗೆದುಕೊಂಡು ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.