ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಹಾಗೂ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪಟ್ಟಣದ ಸೋಮೇಶ್ವರ ಇಂಡಸ್ಟ್ರೀಸ್ ಆವರಣದಲ್ಲಿ ಶನಿವಾರ 106 ಜನ ಹಿರಿಯ ನಾಗರಿಕರ ಜನ್ಮ ದಿನವನ್ನು ಆಚರಿಸಲಾಯಿತು.
ಸಾನ್ನಿಧ್ಯ ವಹಿಸಿದ್ದ ಲಕ್ಮೇಶ್ವರ ಕರೇವಾಡಿಮಠದ ಮಳೆ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಪ್ರಪಂಚಾದ್ಯಂತ ಹಿರಿಯ ನಾಗರಿಕರನ್ನು ಗುರುತಿಸುವುದು, ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವುದು, ಆ ಮೂಲಕ ಯುವ ಪೀಳಿಗೆಗೆ ಮಾರ್ಗದರ್ಶನ ನೀಡುವುದು ಸಂಘ-ಸಂಸ್ಥೆಗಳ ಕೆಲಸವಾಗಿದೆ. ಇಂದಿನ ಯುವ ಜನತೆ ಮೊಬೈಲ್ ಎಂಬ ಮಾಯಾಜಾಲಕ್ಕೆ ಸಿಕ್ಕು ಜೀವನ ಹಾಳು ಮಾಡಿಕೊಳ್ಳುತ್ತಿರುವುದು ವಿಷಾದನೀಯ. ವಯಸ್ಸಾದ ತಂದೆ-ತಾಯಿಯರನ್ನು ಮನೆಯಿಂದ ಹೊರ ಹಾಕುವುದುನ್ನು ಕಾಣುತ್ತಿದ್ದೇವೆ. ಹಿರಿಯರ ಮಾರ್ಗದರ್ಶನದಲ್ಲಿ ನಡೆದು ಜೀವನ ರೂಪಿಸಕೊಳ್ಳಬೇಕು. ಇಂತಹ ಕಾರ್ಯಕರ್ಮಗಳು ಹೆಚ್ಚೆಚ್ಚು ನಡೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಎಸ್.ಪಿ. ಪಾಟೀಲ ಮಾತನಾಡಿ, ನಮ್ಮ ಸಂಸ್ಕೃತಿ, ಪರಂಪರೆಯನ್ನು ಸಂರಕ್ಷಿಸಬೇಕು. ಅವುಗಳನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯಬೇಕು. ಈ ನಿಟ್ಟಿನಲ್ಲಿ ಹಿರಿಯರ ಜ್ಞಾನ, ಅನುಭವವನ್ನು ಗುರುತಿಸುವುದು ಮುಖ್ಯ. ಅದಕ್ಕಾಗಿಯೇ ಒಂದು ವಿಶೇಷ ದಿನವನ್ನು ಮೀಸಲಿಟ್ಟು ಜನವರಿಯಲ್ಲಿ ಬರುವ 106 ಹಿರಿಯರ ಜನ್ಮ ದಿನವನ್ನು ಒಂದೇ ವೇದಿಕೆಯಲ್ಲಿ ಆಚರಿಸಿದ್ದು ಶ್ಲಾಘನೀಯ ಎಂದರು.
ಮಹೇಶ ಲಿಂಬಯ್ಯಸ್ವಾಮಿಮಠ ಮಾತನಾಡಿ, ಸಂಘದಿಂದ ಲಾಭದ ಲೆಕ್ಕಾಚಾರ ಹಾಕಬಾರದು. ಲಾಭದ ಆಸೆ ಇದ್ದರೆ ಅದು ಸ್ವಾರ್ಥ ಆಗುತ್ತದೆ. ಸಂಘಗಳು ಬೆಳೆಯಬೇಕಾದರೆ ಎಲ್ಲ ಸದಸ್ಯರ ಸಹಾಯ-ಸಹಕಾರ ಮುಖ್ಯ ಎಂದರು.
ಈ ಸಂದರ್ಭದಲ್ಲಿ ಚಂಬಣ್ಣ ಬಾಳಿಕಾಯಿ, ಎಸ್.ಸಿ. ಅಳಗವಾಡಿ, ದ್ಯಾಮನಗೌಡ ಪಾಟೀಲ, ಡಿ.ಎಂ. ಪೂಜಾರ, ಚೆನ್ನಪ್ಪ ಕೋಲಕಾರ ಮಾತನಾಡಿದರು. ಶಂಕ್ರಪ್ಪ ಗೊರವರ, ಶಂಕ್ರಪ್ಪ ಮ್ಯಾಗೇರಿ, ಪ್ರಕಾಶ ಉಪನಾಳ, ನಾಗಣ್ಣ ವಡಕಣ್ಣವರ ಮತ್ತಿತರರು ಇದ್ದರು.
ಸಂಘದ ಅಧ್ಯಕ್ಷ ಸಿ.ಆರ್. ಲಕ್ಕುಂಡಿ ಮಾತನಾಡಿ, ಸಮಾಜಕ್ಕೆ ಹಿರಿಯ ನಾಗರಿಕರ ಕೊಡುಗೆ ಮತ್ತು ಅವರ ಸಾಧನೆಗಳನ್ನು ಗೌರವಿಸುವ ಉದ್ದೇಶದಿಂದ ಪ್ರತಿ ತಿಂಗಳು ಸಂಘದಿಂದ ಹಿರಿಯ ನಾಗರಿಕರ ಜನ್ಮ ದಿನವನ್ನು ಆಚರಿಸಲಾಗುತ್ತಿದೆ. ಈ ಮೂಲಕ ಹಿರಿಯ ನಾಗರಿಕರು ಸಮುದಾಯಕ್ಕೆ ನೀಡಿರುವ ಮೌಲ್ಯಯುತ ಜ್ಞಾನ, ಅನುಭವಗಳನ್ನು ಗುರುತಿಸಲಾಗುತ್ತಿದೆ. ಇದೇ ಸಮಯದಲ್ಲಿ ಅವರು ಎದುರಿಸುವ ಸಮಸ್ಯೆಗಳ ಕುರಿತು ಅರಿವು ಮೂಡಿಸುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.



