ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ವಿದ್ಯಾರ್ಥಿ ಜೀವನದಲ್ಲಿ ಸೃಜನಶೀಲತೆ ಮುಖ್ಯ. ಇಂದಿನ ಆಧುನಿಕ ತಂತ್ರಜ್ಞಾನವನ್ನು ಕ್ರಿಯಾಶೀಲತೆಯಿಂದ ಸದ್ಬಳಕೆ ಮಾಡಿಕೊಂಡು ಸದೃಢ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಸತತ ಅಧ್ಯಯನಶೀಲತೆಯಿಂದ ಎಲ್ಲ ಆಯಾಮಗಳಲ್ಲಿ ಸಾಮರ್ಥ್ಯಗಳನ್ನು ಬೆಳೆಸಿಕೊಂಡು ಆಧುನಿಕ ಜಗತ್ತಿನ ಸವಾಲುಗಳಿಗೆ ಸನ್ನದ್ಧರಾಗಬೇಕು. ವಿದ್ಯಾರ್ಥಿ ಜೀವನವನ್ನು ವ್ಯರ್ಥ ಮಾಡದೆ ಜ್ಞಾನದ ಅನ್ವೇಷಣೆಗಾಗಿ ಮೀಸಲಿಡಬೇಕು ಎಂದು ಪ್ರೊ. ಸಿದ್ದು ಯಾಪಲಪರವಿ ಕಿವಿಮಾತು ಹೇಳಿದರು.
ಪಟ್ಟಣದ ಎಫ್.ಎಂ. ಡಬಾಲಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ 2025-26ನೇ ಸಾಲಿನ ಶೈಕ್ಷಣಿಕ ವರ್ಷದ ಕ್ರೀಡಾ/ಸಾಂಸ್ಕೃತಿಕ ಚಟುವಟಿಕೆಗಳ ಪ್ರಾರಂಭೋತ್ಸವ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಗದಗ ಜಿಲ್ಲಾ ಪದವಿಪೂರ್ವ ಉಪನ್ಯಾಸಕರ ಸಂಘದ ಅಧ್ಯಕ್ಷ ಸುರೇಶರಡ್ಡಿ ಸೋಮಣ್ಣವರ ಮಾತನಾಡುತ್ತಾ, ವಿದ್ಯಾರ್ಥಿಗಳು ಏಕಾಗ್ರತೆಯಿಂದ ಕಲಿಕೆಯಲ್ಲಿ ತೊಡಗಿದಾಗ ಸಂಕೀರ್ಣ ವಿಷಯವನ್ನು ಸರಳಗೊಳಿಸಬಹುದು. ಕೇವಲ ಅಂಕ ಗಳಿಕೆಗೆ ಮಹತ್ವ ನೀಡದೆ ಸಂಪೂರ್ಣ ವ್ಯಕ್ತಿತ್ವ ವಿಕಾಸದ ಕಡೆಗೆ ಮಕ್ಕಳು ಗಮನಹರಿಸಬೇಕು ಎಂದರು.
ಅತಿಥಿಗಳಾಗಿ ಆಗಮಿಸಿದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಬಿ.ಜಿ. ಗಿರಿತಮ್ಮಣ್ಣವರ ಮಾತನಾಡುತ್ತಾ, ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಕಲಿಕೆಯ ಸದುಪಯೋಗವನ್ನು ಪಡೆಯಬೇಕು. ತಮ್ಮಲ್ಲಿರುವ ವಿಶೇಷ ಸಾಮರ್ಥ್ಯವನ್ನು ಅನಾವರಣಗೊಳಿಸುವ ಕಡೆಗೆ ಗಮನಹರಿಸಬೇಕು ಎಂದರು.
ಕಾಲೇಜಿನ ಪ್ರಾಚಾರ್ಯ ಎಂ.ಸಿ. ಭಜಂತ್ರಿ ಮಾತನಾಡುತ್ತಾ, ತಮ್ಮಲ್ಲಿರುವ ಸಾಮರ್ಥ್ಯಗಳನ್ನು ಅರಿತು ಸ್ಪರ್ಧೆಯಲ್ಲಿ ಪಾಲ್ಗೊಂಡಾಗ ಆತ್ಮವಿಶ್ವಾಸ ಮೂಡುತ್ತದೆ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಾಗ ಕಲಿಕೆ ಮತ್ತಷ್ಟು ಅರ್ಥಪೂರ್ಣವಾಗುತ್ತದೆ ಎಂದರು.
ಸೇವಾ ನಿವೃತ್ತಿ ಹೊಂದಿದ ದೈಹಿಕ ಶಿಕ್ಷಣ ಉಪನ್ಯಾಸಕ ಎಂ.ಕೆ. ಲಮಾಣಿ ಅವರನ್ನು ಗೌರವಿಸಲಾಯಿತು. ಸಾವಿತ್ರಿಬಾಯಿ ಫುಲೆ ರೇಂಜರ್ಸ್ ಘಟಕದ ವಿದ್ಯಾರ್ಥಿನಿಯರಿಂದ ವಿವಿಧ ಕರಕುಶಲ ವಸ್ತು ಪ್ರದರ್ಶನ ನಡೆಯಿತು. ರಾಜ್ಯಮಟ್ಟದ ವಚನ ಕಮ್ಮಟ ಪರೀಕ್ಷೆಯಲ್ಲಿ ವಿಶೇಷ ಸಾಧನೆಗೈದ 22 ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರವನ್ನು ವಿತರಿಸಲಾಯಿತು.
ವಿಶೇಷ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕರಿಸಲಾಯಿತು. ಪ್ರಥಮ ಪಿಯುಸಿ ವಿಭಾಗದಲ್ಲಿ ಕಿರಣ್ ಬಾನು ಮಲ್ನಾಡದ, ನಫೀಜಾ ಡಾಲಾಯತ, ಸುಜಾತ ಆದಿ, ದ್ವಿತೀಯ ಪಿಯುಸಿ ವಿಭಾಗದಲ್ಲಿ ಮಧು ಗಾಣಿಗೇರ, ರುದ್ರಪ್ಪ ಬುರ್ಜಿ, ರೇಷ್ಮಾ ಪಠಾಣ್ ಇವರನ್ನು, ಕ್ರೀಡಾಕೂಟದಲ್ಲಿ ವೀರಾಗ್ರಣಿಯಾದ ವೀರಯ್ಯ ಎಸ್.ಕಲ್ಲೂರ್‌ರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಡಾ. ಸುರೇಶ್ ಎಸ್.ಡಬಾಲಿ, ಗಿರೀಶ್ ಎಂ.ಡಬಾಲಿ, ಎಸ್.ವೈ. ಪಾಟೀಲ್, ವಿ.ವಿ. ಅಮರ ಶೆಟ್ಟರ, ಸುಮಾ ಡಬಾಲಿ, ಗೌರವ ಕಾರ್ಯದರ್ಶಿ ಎನ್.ಆರ್. ಕುಲಕರ್ಣಿ, ಮುಖ್ಯೋಪಾಧ್ಯಾಯರಾದ ಆರ್.ಎಫ್. ಬಡಕುರ್ಕಿ, ಎನ್.ಹೆಚ್. ಶಿಗ್ಲಿ ಉಪಸ್ಥಿತರಿದ್ದರು. ತೇಜಸ್ವಿನಿ ಬಂಕಾಪುರ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಉಪನ್ಯಾಸಕರಾದ ಎನ್ ಹನುಮರಡ್ಡಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥರಾದ ಸುಧಾ ಹುಚ್ಚಣ್ಣವರ ನಿರೂಪಿಸಿದರು. ಬಹುಮಾನ ವಿತರಣೆ ಕಾರ್ಯಕ್ರಮವನ್ನು ಉಪನ್ಯಾಸಕರಾದ ವೈ.ಎಸ್. ಪಂಗಣ್ಣವರ, ಪಿ.ಎನ್. ಕುಲಕರ್ಣಿ, ಎಂ.ಎಂ. ನದಾಫ್, ಬಸವರಾಜ್ ಶಿರುಂದ್, ಎಫ್.ಎ. ಬಾಬುಖಾನವರ, ಸಿಬ್ಬಂದಿ ಪಿ.ವಿ. ಹೊಸೂರ್ ನಡೆಸಿಕೊಟ್ಟರು.
ಸಂಸ್ಥೆಯ ಆಡಳಿತಾಧಿಕಾರಿ ಐ.ಬಿ. ಬೆನಕೋಪ್ಪ ಮಾತನಾಡುತ್ತಾ, ವಿದ್ಯಾರ್ಥಿಗಳು ಪದವಿಪೂರ್ವ ಹಂತದಲ್ಲಿ ಸರಿಯಾದ ಮಾರ್ಗದಲ್ಲಿ ಮುನ್ನಡೆದರೆ ಮುಂದಿನ ಭವಿಷ್ಯ ಸುಂದರವಾಗಿರುತ್ತದೆ. ಮೊಬೈಲ್ ವ್ಯಸನಿಗಳಾಗದೆ, ಕಲಿಕಾ ವಿಷಯಗಳಲ್ಲಿ ನಿರಂತರ ಪರಿಶ್ರಮಗಳಾಗಬೇಕು ಹಾಗೂ ಉತ್ತಮ ಫಲಿತಾಂಶದೊಂದಿಗೆ ಸಂಸ್ಥೆಗೆ ಗೌರವ ತರುವ ವ್ಯಕ್ತಿಗಳಾಗಬೇಕು ಎಂದರು.