ಬೆಂಗಳೂರು: ಇತ್ತೀಚೆಗೆ ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಮನೆ ಅಗೆಯುವ ವೇಳೆ ನಿಧಿ ಪತ್ತೆಯಾದ ಘಟನೆ ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿದ್ದ ಹಿನ್ನೆಲೆ, ಇದೀಗ ಬೆಂಗಳೂರಿನಲ್ಲಿ ಸಹ ನಿಧಿ ಆಸೆ ಪ್ರಕರಣ ಬೆಳಕಿಗೆ ಬಂದಿದೆ.
ನಗರದ ಎಚ್‌ಎಸ್‌ಆರ್ ಲೇಔಟ್ ವ್ಯಾಪ್ತಿಯ ಎಳ್ಳುಕುಂಟೆ ಪ್ರದೇಶದಲ್ಲಿರುವ ಅಪಾರ್ಟ್‌ಮೆಂಟ್‌ನ ಬೇಸ್ಮೆಂಟ್ ಹಿಂಭಾಗದಲ್ಲಿ ಅಗೆದಿರುವ ಆರೋಪ ಕೇಳಿಬಂದಿದೆ. ಬಿಲ್ಡರ್ ಸುಧಾಕರ್ ನಾಯ್ಡು ಎಂಬಾತ ಹಳೆಯ ವೀರಗಲ್ಲಿನ ಕೆಳಗೆ ನಿಧಿ ಇದೆ ಎಂಬ ನಂಬಿಕೆಯಿಂದ ಅಗೆತ ನಡೆಸಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಅಪಾರ್ಟ್‌ಮೆಂಟ್ ಹಿಂಭಾಗದಲ್ಲಿರುವ ವೀರಗಲ್ಲಿನ ಸುತ್ತ ಕಾಂಪೌಂಡ್‌ಗೆ ತಗಡಿನ ಶೀಟ್ ಹೊಡೆದು ಮುಚ್ಚಳ ಹಾಕಿ, ಬೇಸ್ಮೆಂಟ್ ಭಾಗದಲ್ಲಿ ಅಗೆದಿರುವುದು ಸ್ಥಳೀಯರ ಗಮನಕ್ಕೆ ಬಂದಿದೆ. ವಿಚಾರ ತಿಳಿಯುತ್ತಿದ್ದಂತೆ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿ ಬಿಲ್ಡರ್‌ಗೆ ಪ್ರಶ್ನಿಸಿದ್ದಾರೆ.
ಘಟನೆಯ ಮಾಹಿತಿ ದೊರಕುತ್ತಿದ್ದಂತೆ ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.



