ವಿಜಯಸಾಕ್ಷಿ ಸುದ್ದಿ, ಮುಳಗುಂದ: ಗ್ರಾಮೀಣ ಭಾಗದ ಜನರು ಬದುಕು ಹಸನಾಗಲು ಆರೋಗ್ಯ ಭಾಗ್ಯ ತುಂಬಾ ಅಗತ್ಯವಿದೆ ಎಂದು ದಿ ರೂರಲ್ ಮೆಡಿಕಲ್ ಸರ್ವಿಸ್ ಸೊಸೈಟಿಯ ಕೆ.ಎಚ್. ಪಾಟೀಲ್ ಆಸ್ಪತ್ರೆ ಹಾಗೂ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ಅಧ್ಯಕ್ಷ ಎಸ್.ಆರ್. ನಾಗನೂರ ಹೇಳಿದರು.
ಪಟ್ಟಣದ ಬಾಲಲೀಲಾ ಮಾಹಾಂತ ಶಿವಯೋಗಿ ಕಲಾ ಭವನದಲ್ಲಿ ದಿ ರೂರಲ್ ಮೆಡಿಕಲ್ ಸರ್ವಿಸ್ ಸೊಸೈಟಿಯ ಕೆ.ಎಚ್. ಪಾಟೀಲ್ ಆಸ್ಪತ್ರೆ, ರಿಸರ್ಚ್ ಇನ್‌ಸ್ಟಿಟ್ಯೂಟ್ ಹಾಗೂ ಸೆರೆಂಟಿಕ್ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯವಂತ ಸಮಾಜ ನಿರ್ಮಾಣ ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದ್ದು, ಗ್ರಾಮೀಣ ಭಾಗದ ಸಾರ್ವಜನಿಕರ ಆರೋಗ್ಯವಂತರಾಗಿದ್ದರೆ ಆರೋಗ್ಯವಂತ ಸಮಾಜ ನಿರ್ಮಿಸಲು ಸಾಧ್ಯವಾಗುತ್ತದೆ. ನಮ್ಮ ಸಂಸ್ಥೆ ಕಳೆದ 31 ವರ್ಷಗಳಿಂದ ಆರೋಗ್ಯ ಸೇವೆ ನೀಡುತ್ತಿದ್ದು, ಈಗ 100 ಹಾಸಿಗೆಗಳ ನಮ್ಮ ಆಸ್ಪತ್ರೆ ಸದಾ ಸೇವೆಯಲ್ಲಿದೆ ಎಂದರು.
ಸೆರೆAಟಿಕ್ ಸಂಸ್ಥೆಯ ಬಾಳಕೃಷ್ಣ ಮಾತನಾಡಿ, ಸುಂದರ ಸಮಾಜ ನಿರ್ಮಿಸಲು ಪ್ರತಿಯೊಬ್ಬರ ಆರೋಗ್ಯ ಬಹಳ ಮುಖ್ಯವಾಗಿದೆ. ಇಂದು ನಮ್ಮಲ್ಲಿ ಎಲ್ಲವೂ ಇದೆ. ಆದರೆ, ಆರೋಗ್ಯ ನಿತ್ಯ ಹದಗೆಡುತ್ತಿದ್ದು, ಆರೋಗ್ಯ ಕಾಳಜಿ ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದರು.
ಡಾ. ಎಸ್.ಸಿ. ಚವಡಿ ಮಾತನಾಡಿ, ಈ ಶಿಬಿರದಲ್ಲಿ ನುರಿತ ತಜ್ಞ ವೈದ್ಯರು ಚಿಕಿತ್ಸೆ, ಔಷಧೋಪಚಾರ ನೀಡಿದ್ದು ಸಾಕಷ್ಟು ಬಡ ಕುಟುಂಬಗಳಿಗೆ ಸಹಕಾರಿಯಾಗಿದೆ. ಇದರಿಂದ ಗ್ರಾಮೀಣ ಭಾಗದ ಜನರ ಆರ್ಥಿಕ ಹೊರೆಯನ್ನು ಇಳಿಸಲು ಸಹಕಾರಿಯಾಗಿದೆ ಎಂದರು.
ಅಧ್ಯಕ್ಷತೆಯನ್ನು ಪ.ಪಂ ಅಧ್ಯಕ್ಷೆ ಯಲ್ಲವ್ವ ಕವಲೂರ ವಹಿಸಿದ್ದರು. ಡಾ. ಎಸ್.ಆರ್. ನಾಗನೂರ, ಬಸವರಾಜ ಬೊಮ್ಮನಹಳ್ಳಿ, ಪ್ರೀತ್ ಖೋನಾ, ಪ್ರವೀಣ ತುಪ್ಪದ, ಡಾ. ವೇಮನ ಸಾಹುಕಾರ, ವಿಜೇಶ ಮಾನಕರ, ಎಂ.ಡಿ. ಬಟ್ಟೂರ, ಎಸ್.ಎಂ. ನೀಲಗುಂದ, ಐ.ಎಂ. ಶೇಖ್, ಕೆ.ಎಲ್. ಕರಿಗೌಡರ, ಎಸ್.ಸಿ. ಬಡ್ನಿ, ನಾಗರಾಜ ದೇಶಪಾಂಡೆ, ಬಸವರಾಜ ಬಡ್ನಿ ಇದ್ದರು.