ಮಿನಿ ವಿಶ್ವಕಪ್’ ಎಂದು ಕರೆಯಲ್ಪಡುವ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯು ಮುಂದಿನ ತಿಂಗಳು ಅಂದ್ರೆ ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ಪಾಕಿಸ್ತಾನ ಮತ್ತು ದುಬೈನಲ್ಲಿ ನಡೆಯಲಿದೆ. ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡ ಈಗಾಗಲೇ ಪ್ರಕಟವಾಗಿದೆ.
ಭಾರತ ತಂಡದ ನಾಯಕರಾಗಿ ರೋಹಿತ್ ಶರ್ಮಾ ಮತ್ತು ಉಪನಾಯಕರಾಗಿ ಶುಭಮನ್ ಗಿಲ್ ಕಾರ್ಯನಿರ್ವಹಿಸಲಿದ್ದಾರೆ. ಇವರಲ್ಲದೆ ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ಯಶಸ್ವಿ ಜೈಸ್ವಾಲ್, ರಿಷಭ್ ಪಂತ್ ಮತ್ತು ರವೀಂದ್ರ ಜಡೇಜಾ ತಂಡದಲ್ಲಿದ್ದಾರೆ.
ಆದರೆ ಇದರಲ್ಲಿ ಮೊಹಮ್ಮದ್ ಸಿರಾಜ್ ಅವರನ್ನು ಕೈ ಬಿಡಲಾಗಿತ್ತು. ಉತ್ತಮ ಫಾರ್ಮ್ ನಲ್ಲಿದ್ದರೂ ಸಿರಾಜ್ ಅವರನ್ನು ಕೈ ಬಿಟ್ಟಿದ್ದಕ್ಕೆ ಅಭಿಮಾನಿಗಳು ಕೂಡ ಆಕ್ರೋಶ ಹೊರ ಹಾಕಿದರು. ಆದರೆ ಇದೀಗ ಚಾಂಪಿಯನ್ ಟ್ರೋಫಿಯಲ್ಲಿ ಸಿರಾಜ್ ಅವರು ತಂಡ ಸೇರಿಕೊಳ್ಳೋ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಹೌದು, ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೂ ಮುನ್ನ ಮೊಹಮ್ಮದ್ ಸಿರಾಜ್ ಟೀಮ್ ಇಂಡಿಯಾಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಚಾಂಪಿಯನ್ಸ್ ಟ್ರೋಫಿಗೆ ಜಸ್ಪ್ರೀತ್ ಬುಮ್ರಾ ಅವರ ಲಭ್ಯತೆ ಇನ್ನೂ ಸಹ ಖಚಿತವಾಗಿಲ್ಲ. ಬೆನ್ನು ನೋವಿನ ಸಮಸ್ಯೆಗೆ ಸಿಲುಕಿರುವ ಅವರ ವೈದ್ಯಕೀಯ ವರದಿ ನ್ಯೂಝಿಲೆಂಡ್ ಡಾಕ್ಟರ್ಸ್ಗೆ ಕಳುಹಿಸಲಾಗಿದ್ದು, ಈ ಬಗ್ಗೆ ಪರಿಶೀಲಿಸಿದ ಬಳಿಕ ಬುಮ್ರಾ ಅವರಿಗೆ ಹೆಚ್ಚಿನ ವಿಶ್ರಾಂತಿ ನೀಡಬೇಕಾ ಅಥವಾ ಬೇಡವಾ ಎಂಬುದು ನಿರ್ಧಾರವಾಗಲಿದೆ.
ಒಂದು ವೇಳೆ ನ್ಯೂಝಿಲೆಂಡ್ ವೈದ್ಯಕೀಯ ವರದಿಯಲ್ಲಿ ಬುಮ್ರಾ ಅವರಿಗೆ ಹೆಚ್ಚಿನ ವಿಶ್ರಾಂತಿ ನೀಡಬೇಕೆಂದು ಸೂಚಿಸಿದರೆ, ಅವರನ್ನು ಚಾಂಪಿಯನ್ಸ್ ಟ್ರೋಫಿ ತಂಡದಿಂದ ಕೈ ಬಿಡುವುದು ಖಚಿತ. ಅಲ್ಲದೆ ಅವರ ಬದಲಿಗೆ ಮೊಹಮ್ಮದ್ ಸಿರಾಜ್ ಅವರನ್ನು ತಂಡಕ್ಕೆ ಆಯ್ಕೆ ಮಾಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ
ಈಗಾಗಲೇ ಜಸ್ಪ್ರೀತ್ ಬುಮ್ರಾಗೆ ಬ್ಯಾಕ್ ಅಪ್ ಆಟಗಾರನನ್ನು ಸಿದ್ಧಪಡಿಸಲು ಸೂಚಿಸಲಾಗಿದ್ದು, ಬುಮ್ರಾ 100% ಫಿಟ್ ಆಗದಿದ್ದರೆ ಮೊಹಮ್ಮದ್ ಸಿರಾಜ್ ಅವರನ್ನು ಚಾಂಪಿಯನ್ಸ್ ಟ್ರೋಫಿಗಾಗಿ ಕಳುಹಿಸಲು ಆಯ್ಕೆ ಸಮಿತಿ ಚಿಂತಿಸಿದೆ ಎಂದು ವರದಿಯಾಗಿದೆ.
ಹೀಗಾಗಿ ಫೆಬ್ರವರಿ 19 ರೊಳಗೆ ಜಸ್ಪ್ರೀತ್ ಬುಮ್ರಾ ಸಂಪೂರ್ಣ ಫಿಟ್ನೆಸ್ ಸಾಧಿಸುವುದಿಲ್ಲ ಎಂದು ಕಂಡು ಬಂದರೆ ಅವರನ್ನು ತಂಡದಿಂದ ಕೈ ಬಿಡಬಹುದು. ಅಲ್ಲದೆ ಅನುಭವದ ಆಧಾರದ ಮೇಲೆ ಮೊಹಮ್ಮದ್ ಸಿರಾಜ್ ಅವರನ್ನು ತಂಡಕ್ಕೆ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.