ಬೆನ್ನು ನೋವಿನಿಂದ ಬಳಲುತ್ತಿರುವ ಟೀಂ ಇಂಡಿಯಾ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾರನ್ನು ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ ಹೊರಗಿಡಲಾಗಿದೆ. ಹೌದು ಫೆಬ್ರವರಿ 19 ರಿಂದ ಶುರುವಾಗಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತನ್ನ ಅಂತಿಮ ತಂಡವನ್ನು ಪ್ರಕಟಿಸಿದೆ.
ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿ ಸಂದರ್ಭದಲ್ಲಿ ಬೆನ್ನು ನೋವಿನಿಂದ ಬಳಲುತ್ತಿದ್ದ ಜಸ್ಪ್ರೀತ್ ಬುಮ್ರಾ, ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಬುಮ್ರಾ ಚೇತರಿಸಿಕೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅವರು ಫಿಟ್ ಆಗದ ಹಿನ್ನೆಲೆಯಲ್ಲಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಜಸ್ಪ್ರೀತ್ ಬುಮ್ರಾ ಅವರನ್ನು ಆಡಿಸದಿರಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ನಿರ್ಧರಿಸಿದೆ. ಅವರ ಬದಲಿಗೆ ವೇಗಿ ಹರ್ಷಿತ್ ರಾಣಾ ಅವರನ್ನು 15ರ ಬಳಗಕ್ಕೆ ಸೇರಿಸಲಾಗಿದೆ.
ಇದೀಗ ಅನಿವಾರ್ಯವಾಗಿ ಭಾರತ ತಂಡದಲ್ಲಿ ಬದಲಾವಣೆ ಮಾಡಲಾಗಿದೆ. ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗಾಗಿ ಮೊದಲು ಪ್ರಕಟಿಸಿದ್ದ ತಂಡದಲ್ಲಿ ಬುಮ್ರಾ ಅವರ ಹೆಸರಿತ್ತು. ತಂಡದಲ್ಲಿ ಮತ್ತೊಂದು ಬದಲಾವಣೆ ಮಾಡಲಾಗಿದ್ದು, ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರನ್ನು ತಂಡದಿಂದ ಹೊರಗಿಡಲಾಗಿದೆ.
ಅವರ ಸ್ಥಾನಕ್ಕೆ 33 ವರ್ಷದ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರನ್ನು ಕರೆತರಲಾಗಿದೆ. ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಬಳಿಕ ಏಕದಿನ ಸರಣಿಯಲ್ಲಿ ಅವಕಾಶ ಪಡೆದಿದ್ದ ಚಕ್ರವರ್ತಿ ಇದೀಗ ಚಾಂಪಿಯನ್ಸ್ ಟ್ರೋಫಿಯಲ್ಲೂ ಆಡಲಿದ್ದಾರೆ.