ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಹಿರೇಬಣದಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನ ಹಾಗೂ ಲಕ್ಷ್ಮಣಲಿಂಗ ದೇವಸ್ಥಾನಗಳ ಭಕ್ತರು ಒಂದೆಡೆ ಸೇರಿ ಬನ್ನಿ ಮುಡಿಯುವ ಕಾರ್ಯಕ್ರಮವನ್ನು ಸಂಪ್ರದಾಯದಂತೆ ನೆರವೇರಿಸಿದರು.
ಗುರುವಾರ ಸಂಜೆ ವೆಂಕಟೇಶ್ವರ ದೇವಸ್ಥಾನದ ಸಮೀಪದಲ್ಲಿರುವ ಲಕ್ಷ್ಮಣಲಿಂಗ ದೇವಸ್ಥಾನದ ಹತ್ತಿರ ಬನ್ನಿ ಮುಡಿಯುವ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ತಲೆ ತಲಾಂತರದಿಂದ ಈ ದೇವಸ್ಥಾನದ ಶರನ್ನವರಾತ್ರಿ ಪೂಜೆಯಲ್ಲಿ ಹುಲಗೇರಿಬಣದಲ್ಲಿರುವ ಪಾಟೀಲಕುಲಕರ್ಣಿಯವರ ಮನೆತನದವರು ಪೂಜೆ ಸಲ್ಲಿಸುವ ಪದ್ಧತಿ ಇದ್ದು, ಅದರಂತೆ ಕುಟುಂಬದ ನಾರಾಯಣ ಪಾಟೀಲಕುಲಕರ್ಣಿ ಶಮಿ ವೃಕ್ಷಕ್ಕೆ ಪೂಜೆ ಸಲ್ಲಿಸಿ ಬನ್ನಿ ಮುಡಿಯುವ ಕಾರ್ಯಕ್ಕೆ ಚಾಲನೆ ನೀಡಿದರು.
ಶಮಿ ವೃಕ್ಷಕ್ಕೆ ಪೂಜೆ ಸಲ್ಲಿಸುವ ಸಂದರ್ಭದಲ್ಲಿ ಶ್ರೀ ವೆಂಕಟೇಶ್ವರ ದೇವರ ಹಾಗೂ ಲಕ್ಷ್ಮಣಲಿಂಗ ದೇವರ ಪಲ್ಲಕ್ಕಿಗಳು ಆಗಮಿಸಿ ಎರಡೂ ದೇವರಿಗೂ ಶಮಿ ವೃಕ್ಷದ ಬಳಿ ಪೂಜೆ ಸಲ್ಲಿಸಿ ನಂತರ ಪ್ರದಕ್ಷಿಣೆ ಹಾಕಿ ನೂರಾರು ವರ್ಷಗಳ ಪುರಾತನವಾದ ಖಡ್ಗದಿಂದ ಬನ್ನಿ ಮುಡಿಯುವ ಕಾರ್ಯವನ್ನು ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ನಾರಾಯಣ ಪಾಟೀಲ ಕುಲಕರ್ಣಿ, ಗುರುರಾಜ ಪಾಟೀಲಕುಲಕರ್ಣಿ, ಅರ್ಚಕರಾದ ವೆಂಕಟೇಶ ಗುಡಿ, ಶ್ರೀಕಾಂತ ಪೂಜಾರ, ದತ್ತಾತ್ರೇಯ ಪಾಟೀಲ ಕುಲಕರ್ಣಿ, ಗೋಪಾಲ ಪಡ್ನಿಸ್, ಪಲ್ಲಣ್ಣನವರು ಕುಲಕರ್ಣಿ, ಅರವಿಂದ ದೇಶಪಾಂಡೆ, ಅನಂತಭಟ್ ಪೂಜಾರ, ಚಿಕ್ಕರಸ ಪೂಜಾರ, ದ್ಯಾಮನಗೌಡ ಪಾಟೀಲ, ಸೇರಿದಂತೆ ಅನೇಕರಿದ್ದರು.
ಗುರುವಾರ ಪಟ್ಟಣ ಸೇರಿದಂತೆ ತಾಲೂಕಿನಾಧ್ಯಂತ ಎಲ್ಲ ದೇವಸ್ಥಾನಗಳಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮಗಳು ನೆರವೇರಿದವು. ಪಟ್ಟಣದ ಐತಿಹಾಸಿಕ ಪ್ರಸಿದ್ಧ ಸೋಮೇಶ್ವರ ದೇವಸ್ಥಾನ, ಮೈಲಾರಲಿಂಗೇಶ್ವರ, ವೀರಭದ್ರೇಶ್ವರ, ದ್ಯಾಮವ್ವದೇವಿ, ಅಡರಕಟ್ಟಿ ದ್ಯಾಮವ್ವ ದೇವಸ್ಥಾನ ಸೇರಿದಂತೆ ಎಲ್ಲ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಪುರಾಣ ಮಂಗಲ, ಬನ್ನಿ ವಿನಿಮಯ ಕಾರ್ಯಕ್ರಮಗಳು ನಡೆದವು.