ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ರಂಭಾಪುರಿ ನಗರದಲ್ಲಿ ಸೋಮವಾರ ಬೆಳಿಗ್ಗೆ ಶಿವಪ್ಪ ಭಜಂತ್ರಿ ಅವರಿಗೆ ಸೇರಿದ ಕಿರಾಣಿ ಮತ್ತು ಚಹಾ ಅಂಗಡಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಇಡೀ ಡಬ್ಬಿ ಅಂಗಡಿ ಸುಟ್ಟು ಭಸ್ಮವಾಗಿರುವ ಘಟನೆ ಸಂಭವಿಸಿದೆ.
ಅಂಗಡಿಯಲ್ಲಿದ್ದ ಸಿಲಿಂಡರ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗಿದೆ. ಮಾಲೀಕ 1.13 ಲಕ್ಷ ರೂಪಾಯಿ ನಗದು ಹಣವನ್ನು ಬೇರೆಯವರಿಗೆ ಕೊಡುವ ಸಲುವಾಗಿ ಅಂಗಡಿಯಲ್ಲಿಟ್ಟಿದ್ದರು. ಅಲ್ಲದೆ 50 ಸಾವಿರ ರೂ. ಕಿಮ್ಮತ್ತಿನ ಕಿರಾಣಿ ಸಾಮಾನನ್ನು ಭಾನುವಾರವಷ್ಟೇ ಹಾಕಿಸಿದ್ದರು. ನಗದು ಹಾಗೂ ಕಿರಾಣಿ ವಸ್ತುಗಳು ಬೆಂಕಿಯಲ್ಲಿ ಸುಟ್ಟು ಬೂದಿಯಾಗಿವೆ. ಅಂದಾಜು 2 ಲಕ್ಷ ರೂಪಾಯಿಗಳಷ್ಟು ಹಾನಿ ಉಂಟಾಗಿದೆ ಎಂದು ತಿಳಿದು ಬಂದಿದೆ. ಸುತ್ತಮುತ್ತಲಿನ ಜನರು ಬೆಂಕಿ ನಂದಿಸುವಲ್ಲಿ ಸಹಕರಿಸಿದರು.



