ಬೆಳ್ತಂಗಡಿ: ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದ್ದ ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿ ಶ್ರೀಕ್ಷೇತ್ರ ಧರ್ಮಸ್ಥಳದ ಪರವಾಗಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಅಧಿಕೃತವಾಗಿ ವಕಾಲತ್ತು ಸಲ್ಲಿಕೆಯಾಗಿದೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಮೊಕದ್ದಮೆ ಸಂಖ್ಯೆ 39/2025 ಸಂಬಂಧ ಬೆಂಗಳೂರಿನ ಹಿರಿಯ ನ್ಯಾಯವಾದಿ ಸಿ.ವಿ. ನಾಗೇಶ್ ಹಾಗೂ ಪುತ್ತೂರಿನ ವಕೀಲ ಮಹೇಶ್ ಕಜೆ ಅವರು ನ್ಯಾಯಾಲಯದಲ್ಲಿ ವಕಾಲತ್ತು ಸಲ್ಲಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಸದ್ಯ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸುತ್ತಿದ್ದು, ಈ ಸಂಬಂಧ ಬೆಳ್ತಂಗಡಿ ನ್ಯಾಯಾಲಯಕ್ಕೆ ತನಿಖಾ ವರದಿಯನ್ನೂ ಸಲ್ಲಿಸಲಾಗಿದೆ. ವರದಿಯಲ್ಲಿ ಧರ್ಮಸ್ಥಳದ ವಿರುದ್ಧ ಸಂಚು ರೂಪಿಸಿರುವ ಅಂಶಗಳು ಬಹಿರಂಗಗೊಂಡಿದ್ದರೂ, ಆರೋಪಿಗಳ ವಿರುದ್ಧ ಇದುವರೆಗೆ ಸ್ಪಷ್ಟ ಕ್ರಮ ಕೈಗೊಳ್ಳಲಾಗಿಲ್ಲ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಶ್ರೀಕ್ಷೇತ್ರ ಧರ್ಮಸ್ಥಳದ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡನೆ ನಡೆಯಲಿದೆ. ಎಸ್‌ಐಟಿ ಸಲ್ಲಿಸಿರುವ ವರದಿ ಕುರಿತು ಜನವರಿ 3ರಂದು ಬೆಳ್ತಂಗಡಿ ನ್ಯಾಯಾಲಯ ಆದೇಶ ಹೊರಡಿಸಲಿರುವುದರಿಂದ ಪ್ರಕರಣ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.
ಎಸ್‌ಐಟಿ ತನಿಖೆಯಲ್ಲಿ ಧರ್ಮಸ್ಥಳದ ವಿರುದ್ಧ ಬುರುಡೆ ಪ್ರಕರಣವನ್ನು ಷಡ್ಯಂತ್ರ ರೂಪಿಸಿ ಸೃಷ್ಟಿಸಿರುವುದು ಸಾಬೀತಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಚಿನ್ನಯ್ಯ, ಮಹೇಶ್ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ವಿಠ್ಠಲ ಗೌಡ, ಟಿ. ಜಯಂತ್ ಹಾಗೂ ಸುಜಾತಾ ಭಟ್ ಸೇರಿ ಆರು ಮಂದಿ ಈ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಎಸ್‌ಐಟಿ ದೃಢಪಡಿಸಿದೆ.
ಹಣದ ಆಮಿಷಕ್ಕೆ ಒಳಗಾಗಿ ಎ1 ಆರೋಪಿ ಚಿನ್ನಯ್ಯ ಬುರುಡೆ ಸಂಬಂಧ ಸುಳ್ಳು ಕಥೆ ಕಟ್ಟಿದ್ದು, ಅಪರಿಚಿತ ಶವಗಳನ್ನು ಹೂತಿರುವುದಾಗಿ ಹೇಳಿಕೆ ನೀಡುವಂತೆ ಪ್ರೇರೇಪಿಸಿ ವಿಡಿಯೋ ದಾಖಲೆ ಮಾಡಿಕೊಳ್ಳಲಾಗಿತ್ತು ಎಂಬ ಅಂಶವೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಚಿನ್ನಯ್ಯನಿಗೆ ಪೂರ್ವಪರಿಚಿತನಾಗಿದ್ದ ವಿಠ್ಠಲ ಗೌಡ, ಆತನನ್ನು ಮಹೇಶ್ ತಿಮರೋಡಿ ಮನೆಗೆ ಕರೆದೊಯ್ದಿದ್ದು, ಅಲ್ಲಿ ನಡೆದ ಸಭೆಯಲ್ಲಿ ಗಿರೀಶ್ ಮಟ್ಟಣ್ಣನವರ್, ಟಿ. ಜಯಂತ್ ಹಾಗೂ ವಿಠ್ಠಲ ಗೌಡ ಭಾಗಿಯಾಗಿದ್ದರು ಎಂದು ಎಸ್‌ಐಟಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಸಭೆಯಲ್ಲೇ ಧರ್ಮಸ್ಥಳ ಮೇಲ್ವಿಚಾರಕರ ವಿರುದ್ಧ ಪಿತೂರಿ ರೂಪಿಸಲಾಗಿದ್ದು, ಅದರಂತೆ ಚಿನ್ನಯ್ಯನಿಗೆ ಒಂದು ಬುರುಡೆ ನೀಡಲಾಗಿತ್ತು ಹಾಗೂ ಪೊಲೀಸರಿಗೆ ದೂರು ನೀಡುವಂತೆ ಸೂಚಿಸಲಾಗಿತ್ತು ಎನ್ನಲಾಗಿದೆ.
ನ್ಯಾಯಾಧೀಶರ ಮುಂದೆ ಹೇಳಿಕೆ ನೀಡುವಂತೆ ಚಿನ್ನಯ್ಯನಿಗೆ ಪ್ರೇರೇಪಿಸಲಾಗಿತ್ತು ಎಂಬುದನ್ನೂ ಎಸ್‌ಐಟಿ ವರದಿ ಬಹಿರಂಗಪಡಿಸಿದೆ. ಈ ನಡುವೆ ಶ್ರೀಕ್ಷೇತ್ರ ಧರ್ಮಸ್ಥಳದ ಪರವಾಗಿ ನ್ಯಾಯಾಲಯದಲ್ಲಿ ವಕಾಲತ್ತು ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.



