ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಲಕ್ಷ್ಮೇಶ್ವರದಿಂದ ಕಲ್ಲಾಗನೂರಿಗೆ ಹೊರಟಿದ್ದ ಸಾರಿಗೆ ಬಸ್ ದೊಡ್ಡೂರು-ಸೂರಣಗಿ ನಡುವೆ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಘಟನೆ ಮಂಗಳವಾರ ಮಧ್ಯಾಹ್ನ ಜರುಗಿದ್ದು, ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಮೂವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಮ್ಸ್‌ಗೆ ದಾಖಲಿಸಲಾಗಿದೆ.
ಲಕ್ಷ್ಮೇಶ್ವರ ಡಿಪೋಗೆ ಸೇರಿದ ಬಸ್ (ಕೆಎ.42, ಎಫ್.1571) ಕಲ್ಲಾಗನೂರಿಗೆ ಹೊರಟಿದ್ದು, ದೊಡ್ಡೂರು ದಾಟಿದ ನಂತರ ಏಕಾಏಕಿ ಪಾಟಾ ತುಂಡಾಗಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಎಡಭಾಗಕ್ಕೆ ತಿರುಗಿ ಕಂದಕಕ್ಕೆ ಉರುಳಿದೆ. ಸುದೈವದಿಂದ ಬಸ್ ಉರುಳಿದ ಜಾಗದಲ್ಲಿ ಹೆಚ್ಚು ಗಿಡಗಂಟಿಗಳು ಇದ್ದುದರಿಂದ ಹೆಚ್ಚಿನ ಅಪಾಯ ತಪ್ಪಿದೆ. ಈ ವೇಳೆ ಬಸ್ಸಿನಲ್ಲಿ ಸುಮಾರು 25 ಜನ ಪ್ರಯಾಣಿಕರು ಇದ್ದರು ಎನ್ನಲಾಗಿದೆ. ಬಸ್ ಕಂದಕಕ್ಕೆ ಜಾರುತ್ತಿದ್ದಂತೆ ಗಾಬರಿಗೊಂಡ ಪ್ರಯಾಣಿಕರು ತುರ್ತು ಬಾಗಿಲು ಮುರಿದು ಪಾರಾಗಲು ಮುಂದಾಗಿದ್ದಾರೆ. ಬಸ್ಸಿನಿಂದ ಜಿಗಿಯುವ ಸಂದರ್ಭದಲ್ಲಿ ಸೂರಣಗಿ ಗ್ರಾಮದ ಗಂಗವ್ವ ಲಮಾಣಿ, ಈರಪ್ಪ ಡಾಕಪ್ಪ ಲಮಾಣಿ ಮತ್ತು ಬಾಲೇಹೊಸೂರಿನ ಶಿವಪ್ಪ ಅರಕೇರಿ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಲಕ್ಷ್ಮೇಶ್ವರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಜಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ.



