ಚಿಕ್ಕಮಗಳೂರು ಡಿಪೋಗೆ ಸೇರಿದ ಎರಡು ಸರ್ಕಾರಿ ಬಸ್‌ಗಳನ್ನು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಕೋರ್ಟ್ ಆದೇಶದಂತೆ ಸೀಜ್ ಮಾಡಲಾಗಿದೆ. ಈ ಬಸ್‌ಗಳು ಬೆಂಗಳೂರಿನಿಂದ ಶೃಂಗೇರಿಗೆ ಹೊರಟ್ಟಿದ್ದವು.
ಅಪಘಾತ ಪ್ರಕರಣದಲ್ಲಿ ಪರಿಹಾರ ಹಣವನ್ನು ಕ್ಲೈಮ್ ಮಾಡದಿರುವ ಹಿನ್ನೆಲೆಯಲ್ಲಿ ನ್ಯಾಯಾಲಯ ಆದೇಶ ನೀಡಿದ್ದು, ವಕೀಲರ ತಂಡ ಬಸ್‌ಗಳನ್ನು ತಡೆದು ಕೋರ್ಟ್ ಆವರಣಕ್ಕೆ ಕೊಂಡೊಯ್ಯುವಂತೆ ಸೂಚಿಸಿದೆ.
ಮಾರ್ಗ ಮಧ್ಯೆ ಬಸ್‌ಗಳನ್ನು ನಿಲ್ಲಿಸಿ ಪ್ರಯಾಣಿಕರನ್ನು ಇಳಿಸಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ. ದೂರ ಪ್ರಯಾಣದಲ್ಲಿದ್ದ ಮಹಿಳೆಯರು, ವೃದ್ಧರು ಹಾಗೂ ಮಕ್ಕಳಿಗೆ ತೊಂದರೆ ಉಂಟಾಗಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.
ಘಟನೆ ನಂತರ ಬಸ್‌ಗಳನ್ನು ಚನ್ನರಾಯಪಟ್ಟಣ ಕೋರ್ಟ್ ಆವರಣದಲ್ಲಿ ನಿಲ್ಲಿಸಲಾಗಿದೆ. ಅಪಘಾತ ಪರಿಹಾರ ಹಣದ ವಿಚಾರದಲ್ಲಿ ಉಂಟಾದ ಕಾನೂನು ಗೊಂದಲದಿಂದ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.



