ಗದಗ:- ಚಲಿಸುತ್ತಿದ್ದ ಬಸ್ ನ ಚಕ್ರ ಕಳಚಿ ಅದೃಷ್ಟವಶಾತ್ ಮೂವತ್ತಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ಗದಗ ತಾಲೂಕಿನ ತಿಮ್ಮಾಪುರ ಗ್ರಾಮದ ಬಳಿ ಜರುಗಿದೆ.
ಈ ಬಸ್ ಕೊಪ್ಪಳ ಜಿಲ್ಲೆಯ ಕುಕನೂರಿನಿಂದ ಗದಗ ಕಡೆಗೆ ಬರುತ್ತಿತ್ತು. ಈ ವೇಳೆ ರಸ್ತೆ ಗುಂಡಿ ತಪ್ಪಿಸಲು ಮುಂದಾದಾಗ ಚಕ್ರ ಕಟ್ ಆಗಿರುವ ಶಂಕೆ ವ್ಯಕ್ತವಾಗಿದೆ. ಪರಿಣಾಮ ಏಕಾಏಕಿ ಬಸ್ ಚಕ್ರ ಕಟ್ ಆಗಿದ್ದರಿಂದ ಪ್ರಯಾಣಿಕರು ಗಾಬರಿಯಾಗಿದ್ದರು. ಸುಮಾರು 30 ಪ್ರಯಾಣಿಕರು ಪ್ರಯಾಣಿಸುತ್ತಿದ್ದ ಬಸ್ ನಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ರಸ್ತೆ ಗುಂಡಿಗಳೇ ಅನಾಹುತಕ್ಕೆ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಹರ್ಲಾಪುರದಿಂದ ತಿಮ್ಮಾಪುರ ಸಂಪರ್ಕ ಕಲ್ಪಿಸುವ 8 ಕಿಲೋ ಮೀಟರ್ ರಸ್ತೆ ಗುಂಡಿ ಬಿದ್ದಿದೆ. ತಿಮ್ಮಾಪುರ, ಚಿಕ್ಕೇನಕೊಪ್ಪ, ಬುನ್ನಾಳ, ಯರೆಹಂಚಿನಾಳ ಗ್ರಾಮದ ಜನರಿಗೆ ನಿತ್ಯ ಸಂಕಟ ಎದುರಾಗಿದೆ. ರಸ್ತೆ ದುರಸ್ಥಿಗೆ ಮನವಿ ಸಲ್ಲಿಸಿ ವರ್ಷ ಕಳೆದರೂ ಅಧಿಕಾರಿಗಳು ಗಮನ ಹರಿಸಿಲ್ಲ. ಹೀಗಾಗಿ ಅಧಿಕಾರಿಗಳು, ಜನ ಪ್ರತಿನಿಧಿಗಳ ನಿರಾಸಕ್ತಿಗೆ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.