ಬೆಂಗಳೂರು: ಉದ್ಯಮಿ ಸಿ.ಜೆ.ರಾಯ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ನೀಡುವ ವರದಿ ಏನು ಹೇಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.
ರಾಯ್ ಅವರಿಗೆ ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯಗಳಿಂದ ಕಿರುಕುಳವಿತ್ತು ಎಂಬ ಅವರ ಆಪ್ತರ ಆರೋಪಗಳ ಕುರಿತು ವಿಧಾನಸೌಧದ ಬಳಿ ಇಂದು ಪ್ರತಿಕ್ರಿಯೆ ನೀಡಿದ ಗೃಹ ಸಚಿವರು, “ಪ್ರಕರಣದ ಬಗ್ಗೆ ಅನಗತ್ಯ ಊಹಾಪೋಹಗಳು ನಡೆಯಬಾರದು ಎಂಬ ಕಾರಣದಿಂದಲೇ ತಕ್ಷಣ ಎಸ್‌ಐಟಿ ರಚನೆ ಮಾಡಿದ್ದೇವೆ. ಎಸ್‌ಐಟಿ ತನಿಖಾ ವರದಿ ಏನು ಹೇಳುತ್ತದೆ, ಯಾರ ಪಾತ್ರ ಏನಿದೆ ಎಂಬುದನ್ನು ನೋಡಬೇಕಾಗುತ್ತದೆ” ಎಂದು ಹೇಳಿದರು.
ಇದೀಗ ರಾಯ್ ಅವರ ಆತ್ಮಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಎಸ್‌ಐಟಿ ಅಧಿಕಾರಿಗಳು ಕುಟುಂಬಸ್ಥರ ಹೇಳಿಕೆ ದಾಖಲಿಸಲು ಮುಂದಾಗಿದ್ದಾರೆ. ಇದೇ ವೇಳೆ, ರಾಯ್ ಅವರು ತಮ್ಮ ದಿನನಿತ್ಯದ ಆಗುಹೋಗುಗಳು ಹಾಗೂ ವ್ಯವಹಾರಿಕ ನಿರ್ಧಾರಗಳನ್ನು ದಾಖಲಿಸುತ್ತಿದ್ದ ಡೈರಿಯನ್ನು ತನಿಖಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಡೈರಿಯಲ್ಲಿ ರಾಯ್ ಅವರ ನಿತ್ಯದ ಭೇಟಿಗಳು ಮತ್ತು ವ್ಯವಹಾರ ಸಂಬಂಧಿತ ವಿಚಾರಗಳು ಉಲ್ಲೇಖವಾಗಿದ್ದರೂ, ಅದನ್ನು ಡೆತ್ ನೋಟ್ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಎಸ್‌ಐಟಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ತಮ್ಮ ಸಾವಿಗೆ ನಿರ್ದಿಷ್ಟ ಕಾರಣ ಅಥವಾ ಅಂತಿಮ ಸಂದೇಶವನ್ನು ರಾಯ್ ಅವರು ಡೈರಿಯಲ್ಲಿ ಉಲ್ಲೇಖಿಸಿಲ್ಲ ಎಂದು ತಿಳಿದು ಬಂದಿದೆ. ಹೀಗಾಗಿ ಅದು ಸಾಮಾನ್ಯ ದಿನಚರಿಯಾಗಿದ್ದು, ಡೆತ್ ನೋಟ್ ಅಲ್ಲ ಎಂಬ ನಿಲುವನ್ನು ತನಿಖಾಧಿಕಾರಿಗಳು ತೆಗೆದುಕೊಂಡಿದ್ದಾರೆ.
ಇದಲ್ಲದೆ, ರಾಯ್ ಅವರು ಆತ್ಮಹತ್ಯೆಗೆ ಬಳಸಿದ ಪಿಸ್ತೂಲ್‌ನ್ನು ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಅದು ಬೆಲ್ಜಿಯಮ್‌ನಲ್ಲಿ ತಯಾರಿಸಲಾದ ಸ್ಮಾರ್ಟ್ ಮಿನಿ ಸೌಂಡ್‌ಲೆಸ್ ಪಿಸ್ತೂಲ್ ಆಗಿದ್ದು, ಮೇಲ್ನೋಟಕ್ಕೆ ಪರವಾನಗಿ ಪಡೆದ ಆಯುಧ ಎಂದು ತಿಳಿದು ಬಂದಿದೆ. ಆದರೆ, ಪಿಸ್ತೂಲ್ ಹಾಗೂ ಬುಲೆಟ್‌ಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದ್ದು, ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



