ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜಾಮೀನು ಪಡೆದು ಹೊರ ಬಂದ ಬಳಿಕ ನಟ ದರ್ಶನ್ ಡೆವಿಲ್ ಸಿನಿಮಾದ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ದರ್ಶನ್ ಗೆ ಬೆನ್ನು ನೋವು ಇದ್ದ ಕಾರಣ ಜೈಲಿನಲ್ಲಿದ್ದ ವೇಳೆಯೂ ಚಿಕಿತ್ಸೆ ಪಡೆದುಕೊಂಡಿದ್ದರು. ಇದೀಗ ಸತತ 28 ಗಂಟೆಗಳ ಕಾಲ ಶೂಟಿಂಗ್ ನಲ್ಲಿ ಭಾಗಿಯಾದ ಕಾರಣ ಬೆನ್ನು ನೋವು ಮತ್ತೆ ಹೆಚ್ಚಾಗಿದೆ. ಬೆನ್ನು ನೋವು ಹೆಚ್ಚಾದ ಹಿನ್ನೆಲೆಯಲ್ಲಿ ಇಂದು ದರ್ಶನ್ ಕೋರ್ಟ್ ಗೆ ಹಾಜರಾಗಿಲ್ಲ.
ದರ್ಶನ್ ನಟನೆಯ ಡೆವಿಲ್ ಸಿನಿಮಾದ ಶೂಟಿಂಗ್ ಮೈಸೂರಿನಲ್ಲಿ ನಡೆಯುತ್ತಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ ಹಿನ್ನೆಲೆಯಲ್ಲಿ ಸುಮಾರು ಎಂಟು ತಿಂಗಳ ಕಾಲ ಶೂಟಿಂಗ್ ಸ್ಥಗಿತಗೊಳಿಸಲಾಗಿತ್ತು. ಇದೀಗ ದರ್ಶನ್ ಹೊರ ಬರುತ್ತಿದ್ದಂತೆ ನಿರಂತರ ಶೂಟಿಂಗ್ ಮಾಡಲಾಗುತ್ತಿದೆ. ರಾಜಸ್ಥಾನದಲ್ಲಿ ಬರೋಬ್ಬರಿ 28 ಗಂಟೆಗಳ ಕಾಲ ದರ್ಶನ್ ಶೂಟಿಂಗ್ ನಲ್ಲಿ ಭಾಗಿಯಾಗಿದ್ದರು.
ಬಾಲಿವುಡ್ ನಟ, ನಿರ್ದೇಶಕ ಮಹೇಶ್ ಮಂಜ್ರೇಕರ್ ‘ಡೆವಿಲ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಕೆಲಸ ವಿಳಂಬ ಆಗಿದ್ದು, ಅವರ ಕಾಲ್ಶೀಟ್ ಮುಗಿಯೋ ಹಂತದಲ್ಲಿ ಇತ್ತು. ಈ ಕಾರಣಕ್ಕೆ ದರ್ಶನ್ ಅವರು ನಿರಂತರವಾಗಿ ಶೂಟ್ನಲ್ಲಿ ಭಾಗಿ ಆಗಿ, ಅವರ ಕಾಂಬಿನೇಷನ್ನಲ್ಲಿ ಬರುವ ಶೂಟ್ನ ಪೂರ್ಣಗೊಳಿಸಿಕೊಟ್ಟಿದ್ದಾರಂತೆ. ಹೀಗಾಗಿ ಬೆನ್ನು ನೋವು ಹೆಚ್ಚಾದ ಹಿನ್ನೆಲೆಯಲ್ಲಿ ಇಂದು ಕೋರ್ಟ್ ನಲ್ಲಿ ನಡೆದ ವಿಚಾರಣೆಗೆ ದರ್ಶನ್ ಗೈರಾಗಿದ್ದರು.