ಬೆಂಗಳೂರು:- ಬೈಎಲೆಕ್ಷನ್ ನಡೆಯುತ್ತಿರುವ ಶಿಗ್ಗಾಂವಿ, ಚನ್ನಪಟ್ಟಣ, ಸಂಡೂರು ಕ್ಷೇತ್ರದಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಜೊತೆಗೆ ಕ್ಷೇತ್ರದ ವ್ಯಾಪ್ತಿಯಲ್ಲಿ ಎರಡು ದಿನ ಮದ್ಯ ಮಾರಾಟ ಬಂದ್ ಮಾಡಲಾಗಿದೆ.
ಶಿಗ್ಗಾಂವಿ, ಚನ್ನಪಟ್ಟಣ, ಸಂಡೂರು ಉಪ ಚುನಾವಣೆ ಮೂರೂ ಪಕ್ಷಗಳಿಗೆ ಪ್ರತಿಷ್ಠೆ ಕಣವಾಗಿ ಪರಿಣಮಿಸಿದೆ. ಕೆಲ ದಿನಗಳಿಂದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ಮತಯಾಚನೆ ಮಾಡುವ ಮೂಲಕ ಅಬ್ಬರಿಸಿದ್ದರು. ಆದರೆ ಇಂದು ಅದಕ್ಕೆಲ್ಲ ತೆರೆಬಿದ್ದಿದೆ. ಅಂದರೆ 3 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯವಾಗಿದೆ.
ಕ್ಷೇತ್ರದ ಮತದಾರರಲ್ಲದವರು ಕೂಡಲೇ ಕ್ಷೇತ್ರ ಬಿಟ್ಟು ಹೊರಹೋಗಬೇಕು. ನಾಳೆಯಿಂದ ಎರಡು ದಿನ ಅಭ್ಯರ್ಥಿಗಳು ಮನೆ ಮನೆ ಪ್ರಚಾರ ಮಾಡಲು ಮಾತ್ರ ಅವಕಾಶವಿರುತ್ತದೆ. ಇನ್ನು ನೀತಿ ಸಂಹಿತೆ ಉಲ್ಲಂಘಿಸಿದವರ ವಿರುದ್ಧ ಅಧಿಕಾರಿಗಳು ಕ್ರಮಕೈಗೊಳ್ಳಲಿದ್ದಾರೆ.
ನವೆಂಬರ್ 13 ರಂದು ಮತದಾನ ನಡೆಯೋದ್ರಿಂದ ಶಿಗ್ಗಾಂವಿ, ಚನ್ನಪಟ್ಟಣ ಮತ್ತು ಸಂಡೂರು ಮೂರು ಕ್ಷೇತ್ರ ವ್ಯಾಪ್ತಿಯಲ್ಲಿ ಎರಡು ದಿನ ಮದ್ಯ ಮಾರಾಟ ಬಂದ್ ಮಾಡಲಾಗಿದೆ.