ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶಿರಹಟ್ಟಿ ವಿಧಾನಸಭಾ ಮತಕ್ಷೇತ್ರದ ಕೇಂದ್ರಸ್ಥಾನ ಹಾಗೂ ತಾಲೂಕಾ ಕೇಂದ್ರಸ್ಥಾನವಾಗಿದೆ. ಇತ್ತೀಚೆಗೆ ಗದಗ-ಹೊನ್ನಾಳಿ ರಾಜ್ಯ ರಸ್ತೆ ನಿರ್ಮಾಣವಾಗಿದೆ, ಆದರೆ ಶಿರಹಟ್ಟಿ ತಾಲೂಕಾ ಕೇಂದ್ರಕ್ಕೆ ಹೆದ್ದಾರಿ ಬೈಪಾಸ್‌ನಿಂದ ಸಂಪರ್ಕ ಕಲ್ಪಿಸುವ ರಸ್ತೆಯು ಸಮರ್ಪಕ ಸುಧಾರಣೆ ಯಾವಾಗ ಎಂದು ಜನತೆ ಕಾಯುತ್ತಿದ್ದಾರೆ.
ಗದಗ ಜಿಲ್ಲಾ ಕೇಂದ್ರದಿಂದ ಪ್ರಾರಂಭವಾಗಿ ಹೊನ್ನಾಳಿವರೆಗೂ ಸಾಗುವ ಈ ರಾಜ್ಯ ಹೆದ್ದಾರಿಯು ಶಿರಹಟ್ಟಿಯ ಹೊರವಲಯದಲ್ಲಿ ಹಾದು ಹೋಗಿದೆ. ಕೆಲವು ಗ್ರಾಮಗಳಲ್ಲಿ ಸಂಪರ್ಕ ಕಲ್ಪಿಸುವ ರಸ್ತೆಯನ್ನು ನಿರ್ಮಾಣ ಮಾಡಲಾಗಿದ್ದು, ಶಿರಹಟ್ಟಿ ತಾಲೂಕಾ ಕೇಂದ್ರಕ್ಕೆ ಸೊರಟೂರನಿಂದ ಸಂಪರ್ಕ ಕಲ್ಪಿಸುವ ರಸ್ತೆಯು ಸಮತಟ್ಟಾಗಿಲ್ಲ. ಆದಾಗ್ಯೂ ಪ್ಯಾಚ್‌ಅಪ್‌ಗಳನ್ನು ಮಾಡಲಾಗಿದೆ. ಮುಂಡರಗಿ ಕಡೆಯಿಂದ ಬರುವ ರಸ್ತೆಯನ್ನು ಸಹ ಬರೀ ಪ್ಯಾಚ್‌ಅಪ್ ಮಾಡಿದೆ.
ಇನ್ನು, ತಾಲೂಕಾ ಕೇಂದ್ರದಿಂದ ಬೆಳ್ಳಟ್ಟಿ ಕಡೆಗೆ ರಾಜ್ಯ ಹೆದ್ದಾರಿ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸ್ವಲ್ಪ ದೂರ ರಸ್ತೆ ಮಾಡಲಾಗಿದೆ. ಪೂರ್ಣ ಪ್ರಮಾಣದಲ್ಲಿ ಮಾಡಿಲ್ಲ. ಇಲ್ಲಿ ಪ್ಯಾಚ್‌ಅಪ್‌ಗಳನ್ನು ಸಹ ಮಾಡಿಲ್ಲ. ಆದ್ದರಿಂದ ತಾಲೂಕಾ ಕೇಂದ್ರದ ಸಂಪರ್ಕ ರಸ್ತೆ ಸುಧಾರಣೆ ಏಕಿಲ್ಲ ಎಂದು ಜನತೆ ಪ್ರಶ್ನಿಸುತ್ತಿದ್ದು, ಅಧಿಕಾರಿಗಳಿಂದ ಮಾತ್ರ ಸಮರ್ಪಕ ಉತ್ತರ ಸಿಗುತ್ತಿಲ್ಲ.
ರಾಜ್ಯ ಹೆದ್ದಾರಿ ನಿರ್ಮಾಣ ಮಾಡುವ ಸಮಯದಲ್ಲಿ ಶಿರಹಟ್ಟಿ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಿಂದ ನಿತ್ಯವೂ ನೂರಾರು ಭಾರವಾದ ವಾಹನಗಳು ಸಂಚರಿಸಿದ್ದರಿಂದ ಸುಗಮವಾಗಿದ್ದ ರಸ್ತೆಗಳು ಹಾಳಾಗಿ ಹೋಗಿದ್ದು, ಈ ಬಗ್ಗೆ ಸ್ಥಳೀಯ ಹಲವು ಸಂಘಟನೆಗಳು ಮನವಿ ಸಲ್ಲಿಸಿದ್ದರೂ ಸಹ ಇಲ್ಲಿಯವರೆಗೂ ರಸ್ತೆ ಸುಧಾರಣೆ ಆಗದೇ ಇರುವುದು ಮತ್ತು ಹೆದ್ದಾರಿ ರಸ್ತೆ ನಿರ್ಮಾಣ ಮುಗಿದ ಮೇಲೆ ತಾಲೂಕಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಸುಧಾರಣೆಯಾಗಬಹುದೆಂಬ ನಿರೀಕ್ಷೆಯಲ್ಲಿದ್ದ ಜನತೆಗೆ ನಿರಾಸೆಯಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಪ.ಪಂ ಮಾಜಿ ಅಧ್ಯಕ್ಷ ನಾಗರಾಜ ಲಕ್ಕುಂಡಿ, ಶಿರಹಟ್ಟಿ ತಾಲೂಕಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಹಾಳಾದ ರಸ್ತೆಗಳನ್ನು ನಿರ್ಮಿಸಿಕೊಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಗಿತ್ತು. ಇಲ್ಲಿಯವರೆಗೂ ಕಾಟಾಚಾರಕ್ಕೆ ಎಂಬಂತೆ ಅಲ್ಲಲ್ಲಿ ಪ್ಯಾಚ್‌ಅಪ್‌ಗಳನ್ನು ಮಾತ್ರ ಮಾಡಿದ್ದು, ಸಂಪೂರ್ಣವಾಗಿ ರಸ್ತೆ ದುರಸ್ತಿಪಡಿಸಿಲ್ಲ. ಆದ್ದರಿಂದ ಈ ಕೂಡಲೇ ರಸ್ತೆ ನಿರ್ಮಿಸಿಕೊಡಬೇಕು, ಇಲ್ಲದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು ಎಂದರು.
ಈ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಜಿ.ಪಂ ಮಾಜಿ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ, ತಾ.ಪಂ ಮಾಜಿ ಸದಸ್ಯ ತಿಪ್ಪಣ್ಣ ಕೊಂಚಿಗೇರಿ, ಹೆದ್ದಾರಿ ನಿರ್ಮಾಣ ಮಾಡುವ ಸಂದರ್ಭದಲ್ಲಿ ಸುಗಮವಾಗಿದ್ದ ರಸ್ತೆಗಳು ಹಾಳಾಗಿದ್ದು, ಈ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ರಸ್ತೆ ಸರಿಪಡಿಸಬೇಕು. ಅಧಿಕಾರಿಗಳ ಈ ನಿರ್ಲಕ್ಷ್ಯ ಧೋರಣೆಯನ್ನು ಸಂಸದ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೆ ತರಲಾಗುವುದು ಎಂದರು.


