ಬೆಂಗಳೂರು: ಖ್ಯಾತ ಉದ್ಯಮಿ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣದ ತನಿಖೆ ಬಹುತೇಕ ಅಂತಿಮ ಹಂತಕ್ಕೆ ತಲುಪಿದ್ದು, ವಿಶೇಷ ತನಿಖಾ ತಂಡ (ಎಸ್ಐಟಿ) ಅಧಿಕಾರಿಗಳ ಪ್ರಾಥಮಿಕ ಪರಿಶೀಲನೆಯಲ್ಲಿ ಆತ್ಮಹತ್ಯೆ ಹಿಂದಿನ ಹಲವು ಕಾರಣಗಳು ಮೇಲ್ನೋಟಕ್ಕೆ ಬಹಿರಂಗವಾಗಿವೆ.
ಸಿ.ಜೆ. ರಾಯ್ ಒಂದೇ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿಲ್ಲ ಎನ್ನಲಾಗುತ್ತಿದೆ. ಬದಲಾಗಿ ವೈಭವಯುತ ಜೀವನ ಶೈಲಿ (ಲ್ಯಾವಿಷ್ ಲೈಫ್), ಮಾನಸಿಕ ಒತ್ತಡ, ವ್ಯವಹಾರ ಸಂಬಂಧಿತ ಸಮಸ್ಯೆಗಳು ಸೇರಿದಂತೆ ವಿವಿಧ ಕಾರಣಗಳಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ತಿಳಿದುಬಂದಿದೆ.
ತನಿಖೆಯನ್ನು ಇನ್ನಷ್ಟು ಸಮಗ್ರಗೊಳಿಸಲು, ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದ ಕೊಠಡಿಯಿಂದ ವಶಪಡಿಸಿಕೊಂಡ ಡೈರಿ, ಬಳಸಿದ ಪಿಸ್ತೂಲ್, ಮೊಬೈಲ್ ಫೋನ್, ಕೊಠಡಿ ಬಾಗಿಲಿನ ಲಾಕರ್ ಸೇರಿದಂತೆ 30ಕ್ಕೂ ಹೆಚ್ಚು ವಸ್ತುಗಳನ್ನು ಫರೆನ್ಸಿಕ್ ಸೈನ್ಸ್ ಲ್ಯಾಬೋರೇಟರಿ (ಎಫ್ಎಸ್ಎಲ್)ಗೆ ಕಳುಹಿಸಲಾಗಿದೆ.
ಮುಂದಿನ ವಾರದೊಳಗೆ ಎಫ್ಎಸ್ಎಲ್ ವರದಿ ಎಸ್ಐಟಿ ಅಧಿಕಾರಿಗಳ ಕೈ ಸೇರಲಿದ್ದು, ವರದಿ ಆಧರಿಸಿ ಅಂತಿಮ ತನಿಖಾ ವರದಿ ಸಲ್ಲಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ಎಫ್ಎಸ್ಎಲ್ ವರದಿ ಬಂದ ಬಳಿಕ ಸ್ಪಷ್ಟವಾಗಲಿದೆ.



