ನವದೆಹಲಿ:- ನೂತನ ಉಪರಾಷ್ಟ್ರಪತಿಯಾಗಿ ಸಿ.ಪಿ ರಾಧಕೃಷ್ಣನ್ ಆಯ್ಕೆಯಾಗಿದ್ದಾರೆ.
ಜಗದೀಪ್ ಧನ್ಕರ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಉಪರಾಷ್ಟ್ರಪತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆಯುವ ಮೂಲಕ ಸಿ.ಪಿ ರಾಧಾಕೃಷ್ಣನ್ ಗೆಲುವು ಸಾಧಿಸಿದರು. ರಾಧಾಕೃಷ್ಣನ್ ಅವರು 452 ಮೊದಲ ಪ್ರಾಶಸ್ತ್ಯದ ಮತಗಳನ್ನ ಪಡೆದು ಗೆಲುವು ಸಾಧಿಸಿದ್ರೆ, ಪ್ರತಿಸ್ಪರ್ಧಿ ಸುದರ್ಶನ್ ರೆಡ್ಡಿ 300 ಮತಗಳನ್ನು ಪಡೆದು ಪರಾಭವಗೊಂಡರು.
ನೂತನ ಉಪರಾಷ್ಟ್ರಪತಿಗಳಿಗೆ ಕಾಂಗ್ರೆಸ್ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆ ತಿಳಿಸಿದ್ದಾರೆ. ಈ ಕುರಿತು ತಮ್ಮ ಅಧಿಕೃತ ಎಕ್ಸ್ ಅಕೌಂಟ್‌ನಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್ ರಾಷ್ಟ್ರೀಯ ಸಂವಹನ ಉಸ್ತುವಾರಿ ಮತ್ತು ರಾಜ್ಯಸಭೆ ಸಂಸದ ಜೈರಾಮ್ ರಮೇಶ್, ಭಾರತದ ನೂತನ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರಿಗೆ ಶುಭಾಶಯಗಳು. ರಾಜ್ಯಸಭೆಯ ಸಭಾಪತಿಗಳಾಗಿ ಅವರು ಭಾರತದ ಮೊಟ್ಟ ಮೊದಲ ಉಪರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ ಮಾದರಿಯಲ್ಲಿ ಅಧಿಕಾರ ಚಲಾಯಿಸಲಿದ್ದಾರೆ ಎಂಬ ಭರವಸೆ ಇದೆ. ರಾಜ್ಯಸಭೆಯ ಉದ್ಘಾಟನಾ ದಿನದಂದು ಸರ್ವಪಲ್ಲಿ ರಾಧಾಕೃಷ್ಣನ್ ಅವರು ಸಂಸದೀಯ ಪ್ರಜಾಪ್ರಭುತ್ವದ ಅತ್ಯುನ್ನತ ಸಂಪ್ರದಾಯಗಳನ್ನು ಎತ್ತಿಹಿಡಿಯುವುದಾಗಿ ಮತ್ತು ಪ್ರತಿಪಕ್ಷದ ಬಗ್ಗೆ ನ್ಯಾಯಯುತ ಮತ್ತು ನಿಷ್ಪಕ್ಷಪಾತವಾಗಿರುವುದಾಗಿ ಭರವಸೆ ನೀಡಿದ್ದರು” ಎಂದು ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.
“ವಿರೋಧ ಪಕ್ಷಗಳು ಸರ್ಕಾರದ ನೀತಿಗಳನ್ನು ನ್ಯಾಯಯುತವಾಗಿ ಮತ್ತು ಮುಕ್ತವಾಗಿ ಟೀಕಿಸದಿದ್ದರೆ, ಪ್ರಜಾಪ್ರಭುತ್ವವು ದಬ್ಬಾಳಿಕೆಗೆ ಗುರಿಯಾಗಿ ಅವನತಿ ಹೊಂದುತ್ತದೆ ಎಂದು ಮಾಜಿ ಉಪರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ ಹೇಳಿದ್ದರು. ನೂತನ ಉಪರಾಷ್ಟ್ರಪತಿಗಳು ಅವರ ಮಾರ್ಗದಲ್ಲಿಯೇ ವಿಪಕ್ಷಗಳನ್ನು ಗೌರವಯುತವಾಗಿ ನಡೆಸಿಕೊಳ್ಳಲಿದ್ದಾರೆ ಎಂಬ ಭರವಸೆ ಇದೆ” ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅಭಿನಂದನೆ:
ಇನ್ನು ನೂತನ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರಿಗೆ ಶುಭ ಕೋರಿರುವ ರಾಜ್ಯಸಭಾ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, “ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ಸಾಮಾನ್ಯ. ಹೀಗಾಗಿಯೇ ನಾವು ಉಪರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯನ್ನು ನಿಲ್ಲಿಸಿದ್ದೇವು. ಈಗ ಚುನಾವಣೆ ನುಗಿದು ಸಿ.ಪಿ. ರಾಧಾಕೃಷ್ಣನ್ ಅವರು ಉಪರಾಷ್ಟ್ರಪತಿಗಳಾಗಿ ಆಯ್ಕೆಯಾಗಿದ್ದಾರೆ. ನಾವು ಅವರನ್ನು ಅಭಿನಂದಿಸುತ್ತೇವೆ. ಅವರ ನೇತೃತ್ವದಲ್ಲಿ ರಾಜ್ಯಸಭೆ ಕಲಾಪ ನಿಷ್ಪಕ್ಷಪಾತವಾಗಿ ನಡೆಯತ್ತದೆ ಎಂಬ ಭರವಸೆ ಇದೆ” ಎಂದು ಹೇಳಿದ್ದಾರೆ.