ಬೆಂಗಳೂರು: ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಒಳಗೆ ಒಳ ಮೀಸಲಾತಿ ಕಲ್ಪಿಸಬೇಕು ಎಂಬ ಎಡಗೈ ಪಂಗಡದವರ 35 ವರ್ಷಗಳ ಹೋರಾಟಕ್ಕೆ ಕಡೆಗೂ ಜಯ ಸಿಕ್ಕಿದ್ದು , ಮಂತ್ರಿಮಂಡಲ ಒಪ್ಪಿಗೆ ನೀಡಿರುವುದು ಸ್ವಾಗತಾರ್ಹ ಸಂಗತಿ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಇಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.
” ಈ ಮೂಲಕ ಎಲ್ಲಾ ಹೋರಾಟಗಾರರಿಗೂ ಪಕ್ಷದ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸುತ್ತಿದೆ. ಸದಾಶಿವ ವರದಿ ಆಯೋಗವನ್ನು ಯಥಾವತ್ತಾಗಿ ಅಳವಡಿಸದ ಕಾರಣದಿಂದ ಅಲೆಮಾರಿ ಹಾಗೂ ಇನ್ನಿತರ ಧ್ವನಿ ಇಲ್ಲದ ಸಣ್ಣ ಸಣ್ಣ ಜಾತಿಗಳಿಗೆ ಒಳ ಮೀಸಲಾತಿಯ ಲಾಭ ದಕ್ಕುವುದಿಲ್ಲವೆಂಬ ಭಾವನೆಯೂ ಸಹ ಇದೆ ”
” ಮುಂಬರುವ ದಿವಸಗಳಲ್ಲಿ ಬಾಕಿ ಇರುವ ಎಲ್ಲ ನೇಮಕಾತಿಗಳು, ಮುಂಬಡ್ತಿಗಳು ವೇಗದಲ್ಲಿ ಆಗಬೇಕು. ಪರಿಶಿಷ್ಟ ಜಾತಿ ಹಾಗೂ ಪಂಗಡಗಳು ಸಾಮಾಜಿಕವಾಗಿ ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಸಬಲೀಕರಣ ಗೊಳ್ಳಲು ಸರ್ಕಾರವು ಪರಿಶಿಷ್ಟರಿಗೆ ಮೀಸಲಿಟ್ಟಿರುವ ಹಣವನ್ನು ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಆಮೂಲಾಗ್ರವಾಗಿ ಬದಲಾವಣೆಗಳನ್ನು ತರಲು ಬಳಸಬೇಕಿದೆ .ಈ ಸಮಾಜದ ಮಕ್ಕಳಿಗೆ ವಿಶ್ವ ಗುಣಮಟ್ಟದ ಆಧುನಿಕ ಸರ್ಕಾರಿ ಶಿಕ್ಷಣ ವ್ಯವಸ್ಥೆಯನ್ನು ಕಲ್ಪಿಸುವಂತಹ ಯೋಜನೆಗಳು ಜಾರಿಯಾಗಬೇಕಿದೆ” ಎಂದು ಮುಖ್ಯಮಂತ್ರಿ ಚಂದ್ರು ತಿಳಿಸಿದರು.



