ವಿಜಯಸಾಕ್ಷಿ ಸುದ್ದಿ, ಗದಗ : ಪರಿಶಿಷ್ಟ ಜಾತಿ ಒಳಮೀಸಲಾತಿಯ ವರ್ಗೀಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯದ ಸಪ್ತಪೀಠವು ತೀರ್ಪು ನೀಡಿದ್ದು, ಈ ಬಗ್ಗೆ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಯ ಒಳಮೀಸಲಾತಿ ಕುರಿತಾಗಿ ಆವೈಜ್ಞಾನಿಕ, ಅತಾರ್ಕಿಕ ಹಾಗೂ ಅಸಮರ್ಥನೀಯ ದತ್ತಾಂಶಗಳನ್ನು ಆಧರಿಸಿ ಒಳಮೀಸಲಾತಿ ವರ್ಗೀಕರಣಕ್ಕೆ ಮುಂದಾಗಿರುವುದು ಸಾಮಾಜಿಕ ನ್ಯಾಯದ ಕಗ್ಗೊಲೆಯಾಗಿದೆ. ಈ ಬಗ್ಗೆ ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳಲು ಹೊರಟಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ, ರಾಜ್ಯದ ದಮನಿತ ಹಾಗೂ ಅವಕಾಶ ವಂಚಿತ ಅಲೆಮಾರಿ, ಬಂಜಾರ ಭೋವಿ ಕೊರಮ- ಕೊರಚ-ಕೊರವ ಸಮುದಾಯಗಳ ಪರವಾಗಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
2011ರ ಜನಗಣತಿಯ ಅಂಕಿಅಂಶಗಳನ್ನು ಪರಿಗಣಿಸದೇ, 2024ರ ರಾಜ್ಯದಲ್ಲಿ 101 ಪರಿಶಿಷ್ಟ ಜಾತಿಗಳ ಸಾಮಾಜಿಕ ಹಿಂದುಳಿದಿರುವಿಕೆ, ನಡುವಿನ ಮೀಸಲಾತಿ ಹಂಚಿಕೆಯ ಕುರಿತಾದ, ಹಾಗೂ ಪರಿಶಿಷ್ಟ ಜಾತಿಯ, ಶೈಕ್ಷಣಿಕ, ಔದ್ಯೋಗಿಕ ರಾಜಕೀಯ ಮೀಸಲಾತಿ ಪ್ರಾತಿನಿಧ್ಯವನ್ನು ಕುರಿತಾದ ಸಮರ್ಥನೀಯ ವೈಜ್ಞಾನಿಕ ದತ್ತಾಂಶಗಳನ್ನು (ಎಂಪೆರಿಕಲ್ ಡೇಟಾ) ಕ್ರೋಢೀಕರಿಸಿ, ವೈಜ್ಞಾನಿಕವಾಗಿ ವಿಶ್ಲೇಷಿಸಲು ಸಾಮಾಜಿಕ, ಶೈಕ್ಷಣಿಕ ಮತ್ತು ಕಾನೂನು ಪರಿಣಿತಿಯುಳ್ಳ ತಜ್ಞರ ಸಮಿತಿಯನ್ನು ಕೂಡಲೇ ರಚಿಸಬೇಕು. ಸರ್ವೋಚ್ಛ ನ್ಯಾಯಾಲಯವು ಒಳಮೀಸಲಾತಿ ಕುರಿತು ತೀರ್ಪು ನೀಡಿರುವುದನ್ನು ಪ್ರಶ್ನಿಸಿ 9ನೇ ಪೀಠಕ್ಕೆ ಮನವಿ ಮಾಡಿಕೊಳ್ಳಲು ಈ ವಂಚಿತ ಸಮುದಾಯಗಳು ಮತ್ತು ಸದರಿ ಸಂಘವು ಕಾನೂನು ಹೋರಾಟಕ್ಕೂ ಸಿದ್ಧವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಚಂದ್ರಕಾಂತ ಚವ್ಹಾಣ, ಕೆ.ಸಿ. ನಭಾಪೂರ, ಕುಬೇರಪ್ಪ ರಾಠೋಡ, ಶಿವಪ್ಪ ನಾಯ್ಕ, ಟಿ.ಡಿ. ಪೂಜಾರ, ಎನ್.ವ್ಹಿ. ರಾಠೋಡ, ಕುಬೇರಪ್ಪ ಪವಾರ, ಠಾಕೂರ ಜಾಧವ, ಗೋಪಾಲ ಪೂಜಾರ, ರಾಮಪ್ಪ ಗುರಪ್ಪ ನಾಯ್ಕ, ಧನುರಾಮ ತಂಬೂರಿ, ಅನಿಲ ಕಾರಭಾರಿ, ವಿಠ್ಠಲ ತೋಟದ, ಧನಸಿಂಗ ನಾಯ್ಕ, ರಾಮಪ್ಪ ಚವ್ಹಾಣ, ಗೋವಿಂದ ಢೋಣಿ, ಬಸವರಾಜ ಭಜಂತ್ರಿ, ರಾಘವೇಂದ್ರ ಶಾಂತಗಿರಿ, ವಿಜಯ ಪೂಜಾರ, ಸುರೇಶ ಕಟ್ಟಿಮನಿ, ಲೋಕೇಶ ಕಟ್ಟಿಮನಿ ಹಾಗೂ ಅವಕಾಶ ವಂಚಿತ ಅಲೆಮಾರಿ, ಬಂಜಾರ ಭೋವಿ ಕೊರಮ- ಕೊರಚ-ಕೊರವ ಸಮುದಾಯಗಳ ಮುಖಂಡರು, ಯುವಕರು ಉಪಸ್ಥಿತರಿದ್ದರು.
ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ನಮ್ಮ ಒಳಮೀಸಲಾತಿ ವಿರೋಧಿ ಸಮಿತಿಯ ಹಕ್ಕೊತ್ತಾಯಗಳಾದ ಪರಿಶಿಷ್ಟ ಜಾತಿಯ 101 ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಪ್ರಾತಿನಿಧ್ಯ ಕುರಿತಾದ ಸಮಗ್ರ, ವಸ್ತುನಿಷ್ಟ ಅಂಕಿ-ಅಂಶಗಳ ಕೊರತೆ ಇರುವ, ಅಮಸಮರ್ಥನೀಯ ಹಾಗೂ ಅತಾರ್ಕಿಕ ದತ್ತಾಂಶಗಳ ನ್ಯಾಯಮೂರ್ತಿ ಸದಾಶಿವ ಆಯೋಗ ವರದಿ ಆಧರಿಸಿದ ಪರಿಶಿಷ್ಟ ಜಾತಿಯ ಒಳಮೀಸಲಾತಿ ವರ್ಗೀಕರಣವನ್ನು ತಿರಸ್ಕರಿಸಬೇಕು ಎಂದು ಒತ್ತಾಯಿಸಿದರು.