ಮುಂಬೈ: NCP ನಾಯಕ ಅಜಿತ್ ಪವಾರ್ ಅವರ ಅಕಾಲಿಕ ನಿಧನದ ನಂತರ ಪಕ್ಷದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಬೇಕು ಎಂಬ ಆಗ್ರಹ NCP ವಲಯದಲ್ಲಿ ಕೇಳಿಬರುತ್ತಿದೆ.
ಈ ಕುರಿತು ಮಾತನಾಡಿದ ಅಜಿತ್ ಪವಾರ್ ಅವರ ಆಪ್ತ ಹಾಗೂ ಹಿರಿಯ ಎನ್ಸಿಪಿ ನಾಯಕ ನರಹರಿ ಜಿರ್ವಾಲ್, “ಸುನೇತ್ರಾ ಪವಾರ್ ಅವರನ್ನು ಕ್ಯಾಬಿನೆಟ್‌ಗೆ ಸೇರಿಸಬೇಕು ಎಂಬುದು ಕೆಲ ನಾಯಕರ ಅಭಿಪ್ರಾಯ. ಈ ಬಗ್ಗೆ ಪಕ್ಷದ ನಾಯಕತ್ವದೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ” ಎಂದು ತಿಳಿಸಿದ್ದಾರೆ.
ಬಿಜೆಪಿ ನೇತೃತ್ವದ ಆಡಳಿತಾರೂಢ ಮಹಾಯುತಿ ಮೈತ್ರಿಕೂಟದ ಭಾಗವಾಗಿರುವ ಎನ್ಸಿಪಿ (ಅಜಿತ್ ಪವಾರ್ ಗುಂಪು)ಗೆ ಸುನೇತ್ರಾ ಪವಾರ್ ನಾಯಕತ್ವ ವಹಿಸಿಕೊಳ್ಳಬೇಕು ಎಂಬುದು ಜನರ ಆಶಯವಾಗಿದೆ ಎಂದು ಜಿರ್ವಾಲ್ ಹೇಳಿದ್ದಾರೆ. ಜೊತೆಗೆ ಅವರನ್ನು ಸಚಿವ ಸಂಪುಟಕ್ಕೆ ಸೇರಿಸುವುದು ಪಕ್ಷದ ಬಲವರ್ಧನೆಗೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ಅಜಿತ್ ಪವಾರ್ ನಿಭಾಯಿಸುತ್ತಿದ್ದ ಖಾತೆಗಳ ಮೇಲೂ ಪಕ್ಷದೊಳಗೆ ಚರ್ಚೆ ನಡೆಯುತ್ತಿದೆ. ಅಜಿತ್ ಪವಾರ್ ಅವರ ಬಳಿ ಇದ್ದ ಖಾತೆಗಳು ಪಕ್ಷದ ಕೋಟಾದಡಿಯಲ್ಲಿ ಬರುತ್ತಿರುವುದರಿಂದ, ಅವುಗಳನ್ನು ಎನ್ಸಿಪಿಗೆ ಮುಂದುವರಿಸಿ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಪತ್ರ ಸಲ್ಲಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಅಜಿತ್ ಪವಾರ್ ನಿಧನದ ಹಿನ್ನೆಲೆಯಲ್ಲಿ ನಡೆಯುವ ಸಾಧ್ಯತೆ ಇರುವ ಕ್ಯಾಬಿನೆಟ್ ಪುನರ್ ರಚನೆಯಲ್ಲಿ, ಸುನೇತ್ರಾ ಪವಾರ್ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿ, ಪಕ್ಷದ ಕೋಟಾದಲ್ಲಿರುವ ಹಣಕಾಸು, ಯೋಜನೆ, ರಾಜ್ಯ ಅಬಕಾರಿ, ಕ್ರೀಡೆ ಮತ್ತು ಯುವಜನ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಗಳ ಹೆಚ್ಚುವರಿ ಜವಾಬ್ದಾರಿಗಳನ್ನು ಮುಂದುವರಿಸಬೇಕು ಎಂಬ ಒತ್ತಡವೂ ಹೆಚ್ಚಾಗಿದೆ.



