ಬೆಂಗಳೂರು: ಖಾತೆ ಬದಲಾವಣೆ ಬಗ್ಗೆ ಏನು ತೀರ್ಮಾನ ಮಾಡುತ್ತಾರೋ ಗೊತ್ತಿಲ್ಲ ಎಂದು ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ಪುನಾರಚನೆ ಬಗ್ಗೆ ನನಗೆ ಗೊತ್ತಿಲ್ಲ. ಡಿಸಿಎಂ ಅವರು ದೆಹಲಿಗೆ ಹೋಗಿದ್ದಾರೆ. ಖಾತೆ ಬದಲಾವಣೆ ಬಗ್ಗೆ ಏನು ತೀರ್ಮಾನ ಮಾಡುತ್ತಾರೋ ಗೊತ್ತಿಲ್ಲ. ಇಷ್ಟು ಕಾಲ ವರಿಷ್ಠರು ಏನು ಜವಾಬ್ದಾರಿ ಕೊಟ್ಟಿದ್ದಾರೋ ಅದನ್ನು ಮಾಡಿಕೊಂಡು ಬಂದಿದ್ದೇನೆ.
ಈಗಲೂ ಅವರು ಏನೇ ಜವಾಬ್ದಾರಿ ಕೊಟ್ಟರೂ ಮಾಡುವುದಿಕ್ಕೆ ನಾನು ತಯಾರಾಗಿರುತ್ತೀನಿ. ಪಕ್ಷದ ಸೂಚನೆಯನ್ನು 35 ವರ್ಷಗಳಿಂದ ಪಾಲಿಸಿಕೊಂಡು ಬಂದಿದ್ದೇನೆ. ಸರ್ಕಾರ, ಪಕ್ಷದಲ್ಲಿ ಕೊಟ್ಟ ಜವಾಬ್ದಾರಿ ಮಾಡಿಕೊಂಡು ಬಂದಿದ್ದೇನೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆಯೂ ಕೇಳಿದ್ದೇನೆ. ಒಂದೊಮ್ಮೆ ಆ ವಿಚಾರ ವರಿಷ್ಠರ ಮುಂದೆ ಇದ್ದರೆ ಬದಲಾವಣೆ ಮಾಡುತ್ತಾರೆ ಎಂದರು.
ಇನ್ನೂ ಮುಡಾ ಪ್ರಕರಣದಲ್ಲಿ ಸಿಎಂ ಕುಟುಂಬಕ್ಕೆ ಜಮೀನು ಮಾರಿದ ಮೂಲ ಮಾಲೀಕರ ಮಕ್ಕಳಿಂದ ದೂರು ವಿಚಾರವಾಗಿ ಮಾತನಾಡಿ, ಈಗಾಗಲೇ ಲೋಕಾಯುಕ್ತದಲ್ಲಿ ಮುಡಾ ತನಿಖೆ ನಡೆಯುತ್ತಿದೆ. ಬಹುಶ: ಲೋಕಾಯುಕ್ತದವರು ಇದನ್ನು ಗಮನಿಸಬಹುದು. ತನಿಖೆ ಮಾಡುವವರು ಇದನ್ನು ಗಮಿಸಿಯೇ ತನಿಖೆ ಮಾಡುತ್ತಾರೆ ಎಂದು ತಿಳಿಸಿದರು.